ಬೆಂಗಳೂರು: ಒಂಟಿ ಮಹಿಳೆಯರ ಸರ ಅಪಹರಣ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಸರಗಳ್ಳರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಅಕ್ಬರ್‍ನಗರದ ನಿವಾಸಿ ಕರಾಮತ್ (28) ಹಾಗೂ ತಮಿಳುನಾಡಿನ ಎನ್ ಜಿಒ ಕಾಲೋನಿ ನಿವಾಸಿ ವಿನು ಚಕ್ರವರ್ತಿ (26) ಬಂಧಿತರು. ಇವರಿಂದ ರು.7.50 ಲಕ್ಷ ಮೌಲ್ಯದ 276 ಗ್ರಾಂ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಕರಾಮತ್, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹುಡ್ಕೋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ವಿನು ಚಕ್ರವರ್ತಿ ಜತೆ ಸೇರಿ ಮತ್ತೆ ಸರಗಳ್ಳತನಕ್ಕೆ ಇಳಿದಿದ್ದ. ಬೆಂಗಳೂರು ನಗರದಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಸರ ಅಪಹರಿಸುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಕುಖ್ಯಾತ ಕಳ್ಳರ ಬಂಧನದಿಂದ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 3 ಸರ ಅಪಹರಣ ಹಾಗೂ 1 ದ್ವಿಚಕ್ರ ವಾಹನ ಕಳವು, ಜಯನಗರ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಸರ ಅಪಹರಣ ಸೇರಿದಂತೆ ಒಟ್ಟು 6 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ನಗರದಲ್ಲಿ ಮೂರು ಕಡೆ ಸರಗಳ್ಳತನಗಳನ್ನು ನಡೆಸಿದ್ದಾರೆ. ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಇವರ ಮೇಲೆ ಒಟ್ಟು 30 ವಾರೆಂಟ್ ಗಳಿದ್ದವು ಎಂದು ಹಿರಿಯ ಅಧಿಕಾರಿ ತಿಳಿಸಿದರು. ಮತ್ತೊಂದು ತಂಡದ ಇಬ್ಬರ ಬಂಧನ: ಒಂಟಿ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ವರ್ತೂರು ಪೊಲೀಸರು ರು.3.50 ಲಕ್ಷ ಮೌಲ್ಯದ 85 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಣ್ಣ ಅಲಿಯಾಸ್ ಬೆಳ್ಳಾ ರಾಜ (43) ಹಾಗೂ ಅಂಬರೀಶ (31) ಬಂಧಿತರು.
ನಿರ್ಜನ ಪ್ರದೇಶಗಳಲ್ಲಿ ಓಡಾಡುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದರು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕೋಲಾರದ ವೇಮಗಲ್ ನ ಮುತ್ತೂಟ್ ಫೈನಾನ್ಸ್ ಮತ್ತು ತುಮಕೂರು ಜಿಲ್ಲೆ ಹೆಬ್ಬೂರಿನ ಮೈಲಾರಲಿಂಗೇಶ್ವರ ಆಭರಣ ಮಳಿಗೆಯಲ್ಲಿ ಅಡ ಇಟ್ಟಿದ್ದ ಮೂರು ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಮಡಿವಾಳ ಹಾಗೂ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಮೂರು ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.