ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕೈದಿಗಳ ಬಾಳು ಬದಲಿಸಿದ ರಂಗಯಾತ್ರೆ

ತಿಳಿದೋ, ತಿಳಿಯದೆಯೋ ಅಪರಾಧ ಜಗತ್ತಿಗೆ ಕಾಲಿಡುತ್ತಾರೆ. ಹೊರಜಗತ್ತಿನಲ್ಲಿ ಹಾಯಾಗಿದ್ದವರು ಜೈಲು ಸೇರಿದ ಮೇಲೆ ಪಂಜರದ ಹಕ್ಕಿಗಳಾಗುತ್ತಾರೆ. ಆದರೆ, ಅವರಲ್ಲೂ ಪ್ರತಿಭೆಯಿದೆ. ಅವಕಾಶ ಸಿಕ್ಕರೆ ಅದು ಹೊರಹೊಮ್ಮುತ್ತದೆ...

ಬೆಂಗಳೂರು ಕೇಂದ್ರೀಯ ಕಾರಾಗೃಹ
Srinivasa Murthy VN
Updated On : 4 Nov 2015, 11:16 am

ಬೆಂಗಳೂರು: ತಿಳಿದೋ, ತಿಳಿಯದೆಯೋ ಅಪರಾಧ ಜಗತ್ತಿಗೆ ಕಾಲಿಡುತ್ತಾರೆ. ಹೊರಜಗತ್ತಿನಲ್ಲಿ ಹಾಯಾಗಿದ್ದವರು ಜೈಲು ಸೇರಿದ ಮೇಲೆ ಪಂಜರದ ಹಕ್ಕಿಗಳಾಗುತ್ತಾರೆ. ಆದರೆ, ಅವರಲ್ಲೂ ಪ್ರತಿಭೆಯಿದೆ. ಅವಕಾಶ ಸಿಕ್ಕರೆ ಅದು ಹೊರಹೊಮ್ಮುತ್ತದೆ.

ಮೈಸೂರಿನ ಸರ್ಕಾರೇತರ ಸಂಸ್ಥೆ `ಸಂಕಲ್ಪ' ಇಂಥ ಕೈದಿಗಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತ ಅಪರಾಧಿಗಳ ಮನಪರಿವರ್ತನೆ ಮಾಡುತ್ತಿದೆ. ಇದಕ್ಕೆ ಕೈಜೋಡಿಸಿರುವ ಕರ್ನಾಟಕ ಕಾರಾಗೃಹ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ನ.6ರಿಂದ `ಜೈಲಿನಿಂದ ಬಯಲಿಗೆ ರಂಗಯಾತ್ರೆ' ಆಯೋಜಿಸಿದೆ. ಈ ಕುರಿತು ಮಾತನಾಡಿದ ರಂಗ ನಿರ್ದೇಶಕ ಹುಲಗಪ್ಪ ಕಟ್ಟಿಮನಿ, ``ಕೈದಿಗಳಿಗೆ ನಟನೆ ಮೂಲಕ ಬದುಕು ತಿಳಿಸಲಾಗುತ್ತಿದೆ. ಸುಮಾರು 30 ಕೈದಿಗಳು ನಾಟಕಗಳಲ್ಲಿ ಅಭಿನಯಿಸಲಿದ್ದಾರೆ. ಸೆಪ್ಟೆಂಬರ್‍ನಲ್ಲಿ ಬಿಡುಗಡೆಗೊಂಡ 10 ಜನ ಕೈದಿಗಳು ಅಭಿನಯಸಲಿದ್ದಾರೆ. ಈ ಮೂಲಕ ಮನಃ ಪರಿವರ್ತನೆ ಮಾಡಲಾಗುತ್ತಿದೆ. ಗಾಂಧಿ ನಾಟಕ ಮಾಡಿದ್ದ ಕೆಲವು ಕೈದಿಗಳು ಮಾಂಸಹಾರ ಸೇವನೆಯನ್ನೇ ಬಿಟ್ಟಿದ್ದಾರೆ,'' ಎಂದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನ.6ರ ಸಂಜೆ 7 ಗಂಟೆಗೆ ಎಚ್.ಎಸ್. ಶಿವಪ್ರಕಾಶ್ ರಚಿಸಿದ ಷೇಕ್ಸಪಿಯರ್‍ನ ಮ್ಯಾಕಬೆತ್ ಆಧಾರಿತ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ`ಮಾರನಾಯಕ' , ಜಯಂತ ಕಾಯ್ಕಿಣಿ ರಚಿಸಿ ದ `ಜತೆಗಿರುವನು ಚಂದಿರ', ಜೀವನ- ಕುಮಾರ್ ಹೆಗ್ಗೋಡು ನಿರ್ದೇಶನದ `ಭಗವದಜ್ಜುಕೀಯಂ ಅರ್ಥಾತ್ ಸೂಳೆ ಸನ್ಯಾಸಿ' ನಾಟಕವನ್ನು ನ.8ರಂದು ಸಂಜೆ 7 ಗಂಟೆಗೆ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಬಿಡುಗಡೆಗೊಂಡ ಕೈದಿ ಮಹೇಶ್ ಭೋಗಾದಿ ಮಾತನಾಡಿ, ``ನಾನು ಕೊಲೆ ಪ್ರಕರಣ ಒಂದರಲ್ಲಿ ಭಾಗಿಯಾಗಿ 1996ರಲ್ಲಿ ಜೈಲು ಸೇರಿದ್ದೆ. ಮಾನಸಿಕ ತೊಳಲಾಟದಲ್ಲಿದ್ದ ನನಗೆ ಕಲೆ ಆಸರೆ ನೀಡಿತು. ನಾಟಕ ಬದುಕುವುದನ್ನು ಕಲಿಸಿಕೊಟ್ಟಿದೆ. ನಟನೆ ಮೂಲಕ ನನ್ನ ವ್ಯಕ್ತಿತ್ವದಲ್ಲಿ ಪರಿವರ್ತನೆ ಕಂಡುಕೊಂಡ ಮೇಲೆ 2006ರಲ್ಲಿ ನನಗೆ ಜೈಲಿನಿಂದ ಬಿಡುಗಡೆ ಆಯಿತು. ನಾನು ಇದೀಗ ಕಾರ್ ಸರ್ವಿಸ್ ಸೆಂಟರ್ ತರೆದು, ಕುಟುಂಬದೊಂದಿಗೆ ಜೀವನ ಮಾಡುತ್ತಿದ್ದೇನೆ'' ಎಂದರು.

ಮತ್ತೊಬ್ಬ ಕೈದಿ ಶರತ್ ಶೆಟ್ಟಿ ಮಾತನಾಡಿ, `ನಾನು ಸೆಪ್ಟೆಂಬರ್‍ನಲ್ಲಿ ಬಿಡುಗಡೆಗೊಂಡೆ. 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ನಾಟಕ ನನಗೆ ಮನುಷ್ಯತ್ವ ಕಲಿಸಿತು. `ಸೂಳೆ ಸನ್ಯಾಸಿ` ನಾಟಕದಲ್ಲಿ ದೊಡ್ಡ ಪಾತ್ರವಾದ `ಸನ್ಯಾಸಿ` ಪಾತ್ರ ಮತ್ತು `ಹುಲಿಯ ನೆರಳು' ನಾಟಕದಲ್ಲಿ ರಾಮಗೊಂಡದಂತಹ ಬಹುದೊಡ್ಡ ಪಾತ್ರ ನಿಭಾಯಿಸುವ ಅವಕಾಶ ಸಿಕ್ಕಿತು'' ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಶ್ರಾಂತ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಮತ್ತು ಸಂಕಲ್ಪ ಸಂಸ್ಥೆಯ ಗೌರವ ಅಧ್ಯಕ್ಷ ಗೋಪಾಲ ಹೊಸೂರ್, ಹಿರಿಯ ರಂಗಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಮತ್ತು ಹೆಚ್ಚುವರಿ ಕಾರಾಗೃಹಗಳ ಮಹಾನಿರೀಕ್ಷಕ ವೀರಭದ್ರಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement