ಬೆಂಗಳೂರು: ತೋಟಗಾರಿಕಾ ಇಲಾಖೆಯು ನಗರದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ `ಭೂದೃಶ್ಯ' ಹಬ್ಬವನ್ನು ನ.11ರಿಂದ 15ರವರೆಗೆ ಲಾಲ್‍ಬಾಗ್‍ನ ಗಾಜಿನ ಅರಮನೆಯಲ್ಲಿ ಆಯೋಜಿಸಿದೆ.
ನಗರದಲ್ಲಿ ಸಾಕಷ್ಟು ಉದ್ಯಾನಗಳಿವೆ. ಆದರೆ, ಅವುಗಳ ಸಮರ್ಪಕ ನಿರ್ವಹಣೆ- ಯಾಗುತ್ತಿಲ್ಲ. ಅಲ್ಲಿರುವ ಗಿಡಗಳಿಗೆ ಹೊಸ ರೂಪ ನೀಡಿ, ನಾಗರಿಕರಿಗೆ ಅವುಗಳು ಆಕರ್ಷಕವಾಗಿ ಕಾಣುವಂತೆ ಮಾಡುವುದು ಈ ಹಬ್ಬದ ಉದ್ದೇಶ. ಹಾಗಾಗಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ- ಪ್ರದೇಶದಿಂದ ಸುಮಾರು 3ರಿಂದ 4 ಸಾವಿರ ಉದ್ಯಾನ ನಿರ್ವಹಣ ತಜ್ಞರು ಈ ಹಬ್ಬಕ್ಕೆ ಆಗಮಿಸುತ್ತಿದ್ದಾರೆ.
ಗಾಜಿನ ಮನೆಯಲ್ಲಿ ಅವರಿಗೆ ಜಾಗವನ್ನು ಕಲ್ಪಿಸಲಾಗಿದೆ. ಗಿಡಗಳನ್ನು ಬೆಳೆಸುವುದು, ಸುಂದರವಾಗಿ ಕಟಾವು ಮಾಡುವುದು ವಿದ್ಯುದ್ವೀಪಗಳ ಅಳವಡಿಕೆ ಸೇರಿದಂತೆ ವನಗಳ ಅಂದ ಹೆಚ್ಚಿಸುವ ಕುರಿತು ಪ್ರಾಯೋಗಿಕ ತರಬೇತಿಯನ್ನೂ ನೀಡಲಾಗುವುದು. ಈ ಹಬ್ಬಕ್ಕೆ ಒಟ್ಟು 95 ಮಳಿಗೆಗಳನ್ನು ಹಾಕಲಾಗುತ್ತಿದೆ. ಅವುಗಳಲ್ಲಿ ಹೊಸ ಬಗೆಯ ಗಿಡಗಳು, ಉದ್ಯಾನವನಕ್ಕೆ ಬೇಕಾದ ಸಾಮಗ್ರಿಗಳು, ಉದ್ಯಾನ ನಿರ್ವಹಣೆ ಕುರಿತಂತೆ ಹಲವಾರು ಪುಸ್ತಕಗಳು ಲಭ್ಯವಿರುತ್ತದೆ ಎಂದು ರಾಜ್ಯ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.