ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಲಂಚ ಪ್ರಕರಣದ ಸಂಬಂಧ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹಿಸಿದೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು, ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಬಯಲಾಗಿದೆ. ಭ್ರಷ್ಟಾಚಾರ ನಡೆಸಲು ಮಂತ್ರಿಗಳ ಮನೆಯೇ ಕೇಂದ್ರಬಿಂದುವಾಗಿದೆ. ಮಾತ್ರವಲ್ಲದೆ ಸಚಿವರ ಕುಟುಂಬವು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿರುವುದು ರಾಜ್ಯಕ್ಕೆ ಕಪ್ಪುಚುಕ್ಕೆ. ಸರ್ಕಾರದ ಸಹಕಾರವಿಲ್ಲದೆ ಇಂತಹ ಪ್ರಕರಣಗಳು ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಹಗರಣದ ಇಲಾಖೆ: ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿನ ಭ್ರಷ್ಟಾಚಾರ ಮಿತಿಮೀರಿದೆ. ಇಲಾಖೆಯಲ್ಲಿ ಪದೇ ಪದೇ ಹಗರಣಗಳು ನಡೆಯುತ್ತಲೇ ಇರುತ್ತವೆ ಎಂಬುವುದಕ್ಕೆ ಈ ಮೊದಲು ಬೆಳಕಿಗೆ ಬಂದಿದ್ದ ಹಾಸಿಗೆ-ದಿಂಬು ಖರೀದಿ ಹಗರಣವೇ ನಿದರ್ಶನ ಎಂದರು.
ತಮ್ಮದು ಪಾರದರ್ಶಕ ಸರ್ಕಾರ ಎನ್ನುತ್ತಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಲಂಚ ಪಡೆಯುವುದು ಸಹ ಪಾರದರ್ಶಕವಾಗಿದೆ. ಬಡ ಮಕ್ಕಳ ಅನ್ನವನ್ನೇ ಕಿತ್ತುಕೊಳ್ಳುವ `ಕನ್ನ ಭಾಗ್ಯ'ದ ನೈತಿಕ ಹೊಣೆ ಹೊತ್ತು ಸಚಿವ ರಾಜಿನಾಮೆ ನೀಡಬೇಕು. ಒಂದು ವೇಳೆ ಸಚಿವರು ರಾಜಿನಾಮೆಗೆ ಮುಂದಾಗದಿದ್ದಲ್ಲಿ ಸಂಪುಟದಿಂದ ವಜಾಗೊಳಿಸಿ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತನಿಖೆಗೆ ಆಗ್ರಹಿಸಿ ಪ್ರತಿಭಟನೆ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ನೀಡುವ ಸಂಬಂಧ ಸಚಿವರ ಪತ್ನಿ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ವ್ಯವಸ್ಥಿತ ಪಿತೂರಿಯಾಗಿದೆ. ಇದರ ಹಿಂದಿನ ಸತ್ಯಾಸತ್ಯತೆ ತಿಳಿಯಲು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಸೋಮವಾರ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಿತು.
ಭ್ರಷ್ಟಾಚಾರ ಆರೋಪದ ಹಿಂದೆ ದಲಿತರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಮತೀಯ ಶಕ್ತಿಗಳ ಕೈವಾಡವಿದೆ. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆಗೆ ಕಳಂಕ ತರುವ ಮೂಲಕ ಇಲಾಖೆಯನ್ನೇ ಮುಚ್ಚಿಸುವ ಷಡ್ಯಂತ್ರ ನಡೆದಿದೆ. ಪ್ರಕರಣದಲ್ಲಿ ಸಚಿವರ ಪತ್ನಿ ನೇರ ಭಾಗಿತ್ವವಿಲ್ಲದಿದ್ದರೂ, ಸಚಿವರ ತೇಜೋವಧೆ ಹಾಗೂ ಸರ್ಕಾರವನ್ನು ದುರ್ಬಲಗೊಳಿಸುವ ಸಂಚು ರೂಪಿಸಲಾಗಿದೆ. ಹಾಗಾಗಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು.
ಸಚಿವರು ರಾಜಿನಾಮೆ ನೀಡುವುದರಿಂದ ಭ್ರಷ್ಟಾಚಾರ ನಿರ್ಮೂಲನೆಗೆ ತಕ್ಕ ಪರಿಹಾರವಾಗುವುದಿಲ್ಲ. ಅಲ್ಲದೆ ಆರೋಪ ಸಾಬೀತಾಗದೆ ರಾಜಿನಾಮೆಗೆ ಒತ್ತಾಯಿಸುವುದು ಸರಿಯಲ್ಲ. ಬದಲಿಗೆ ಇಲಾಖೆಯ ಕೆಲ ಅಧಿಕಾರಿಗಳು ಭ್ರಷ್ಟತೆಯಲ್ಲಿ ಮುಳುಗಿದ್ದು, ಅಂಥವರ ವಿರುದಟಛಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.