ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಯಡಿ ಬಿಡುಗಡೆ ಮಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುಮಾರು ರು.539 ಕೋಟಿ ಅನುದಾನವನ್ನು ಸಂಬಂಧಪಟ್ಟ ಯೋಜನೆಗಳಿಗೆ ಬಳಕೆ ಮಾಡದೆ ಅಕ್ರಮವಾಗಿ ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟಿರುವ ಹಗರಣ ಸಂಬಂಧ ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಬಿ.ಎಸ್. ರಾಯಗೇರಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ, ರಾಯಗೇರಿ ಅವರನ್ನು ಸರ್ಕಾರ ಅಮಾನತು ಮಾಡಿದೆ.
ಉದ್ದೇಶಪೂರ್ವಕ ವಂಚನೆ: ರಾಯಗೇರಿ ಹಾಗೂ ಇತರರು ರು.539 ಕೋಟಿ ಹಣವನ್ನು ಅಕ್ರಮವಾಗಿ ಠೇವಣಿ ಇಟ್ಟು ಸರ್ಕಾರಕ್ಕೆ ವಂಚಿಸಿದ್ದಾರೆ. ಸರ್ಕಾರದ ಯೋಜನೆಗಳಿಗೆ ಬಳಕೆಯಾಗಬೇಕಿದ್ದ ಹಣ ಕಾವೇರಿ ಭವನ ಬ್ಯಾಂಕ್‍ನಲ್ಲಿ ಠೇವಣಿ ಇರಿಸಬೇಕಿತ್ತು. ಆದರೆ, ಆರೋಪಿಗಳು ಬೇರೆ ಬೇರೆ ಬ್ಯಾಂಕ್‍ಗಳಲ್ಲಿ ಠೇವಣಿ ಇಡುವ ಮೂಲಕ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಲಾಗಿದೆ. ಪ್ರಕರಣದಲ್ಲಿ ಉಲ್ಲೇಖಿಸಿರುವ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುತ್ತದೆ. ಇದೇ ವೇಳೆ ವಿವಿಧ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಹಣದ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸುತ್ತೇವೆ. ಅಗತ್ಯ ಬಿದ್ದರೆ ಆರೋಪ ಎದುರಿಸುತ್ತಿರುವ ಆರೋಪಿಗಳ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಏನಿದು ಹಗರಣ?
ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದ್ದ ಅನುದಾನವನ್ನು ಯೋಜನೆಗಳಿಗೆ ಬಳಕೆ ಮಾಡದೆ ಹಲವಾರು ಬ್ಯಾಂಕ್‍ಗಳಲ್ಲಿ ಅಕ್ರಮ ಠೇವಣಿ ಇಟ್ಟಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿತ್ತು.
ಯೋಜನೆಗೆ ಸಂಬಂಧಿಸಿದ ಅನುದಾನವನ್ನು ಠೇವಣಿ ಇಟ್ಟಿರುವ ಕುರಿತು ನಿರ್ವಹಿಸಲಾದ ಕಡತ ಮತ್ತು ಇತರ ಮಾಹಿತಿಯನ್ನು ಬಿ.ಎಸ್ ರಾಯಗೇರಿಯವರು ತನಿಖಾ ತಂಡಕ್ಕೆ ಒದಗಿಸಿರಲಿಲ್ಲ. ಹೀಗಾಗಿ, ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ರಾಯಗೇರಿ ಅವರು 2015ರ ಆಗಸ್ಟ್ 18ರಂದು ನೀಡಿರುವ ವಿವರಣೆಯಲ್ಲಿ ಎಲ್ಲಾ ದಾಖಲೆಗಳನ್ನು ಸಮಿತಿಗೆ ನೀಡಿರುವುದಾಗಿ ಹೇಳಿದ್ದರು.
ಶ್ರೀಧರ್ ಅಧ್ಯಕ್ಷತೆಯ ಸಮಿತಿ ತನಿಖೆ ವೇಳೆ ಬಿಡಬ್ಲ್ಯೂಎಸ್‍ಎಸ್‍ಬಿ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಪರಿಶೀಲಿಸಿದಾಗ ಒಟ್ಟು 105 ಖಾತೆ ತೆರೆದಿರುವುದು ಗೊತ್ತಾಗಿದೆ. ಈ ಪೈಕಿ ಒಂದು ಖಾತೆಯಲ್ಲಿ ರು.495 ಕೋಟಿಗೂ ಅಧಿಕ ಹಣ ಹಾಗೂ ಮತ್ತೊಂದು ಖಾತೆಯಲ್ಲಿ ರು.44.17 ಕೋಟಿ ಹಣ ಹಾಗೂ ಇತರ ಹಲವು ಖಾತೆಗಳಲ್ಲಿಯೂ ಹಣ ಇಟ್ಟಿರುವುದು ಬೆಳಕಿಗೆ ಬಂದಿತ್ತು. ಕರ್ತವ್ಯನಿಷ್ಠೆ ಪ್ರದರ್ಶಿಸದೆ ಮಾಹಿತಿ ಮುಚ್ಚಿಟ್ಟಿರುವ ಕಾರಣ ಸರ್ಕಾರ ಬಿ.ಎಸ್. ರಾಯಗೇರಿ ಅವರನ್ನು ಈಗಾಗಲೇ ಅಮಾನತು ಮಾಡಿದೆ.