ಬೆಂಗಳೂರು: ಬಿಎಂಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸೂರು ರಸ್ತೆಯಲ್ಲಿ ನಡೆದಿದೆ.
ಸಿ.ವಿ.ರಾಮನ್‍ನಗರ ನಿವಾಸಿ ಮೇರಿ ಸಿಂಧು (20) ಮೃತ ವಿದ್ಯಾರ್ಥಿನಿ. ಹೂಡಿ ಬಳಿಯ ಗೋಪಾಲನ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೇರಿ, ನ.12ರ ಮಧ್ಯಾಹ್ನ 12.30 ಗಂಟೆಗೆ ಸಹಪಾಠಿ ಯೋಗೇಶ್ ಜತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಮೆಜೆಸ್ಟಿಕ್ ನಿಂದ ಅತ್ತಿಬೆಲೆ ಮಾರ್ಗದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.
ತೀವ್ರ ಗಾಯಗೊಂಡಿದ್ದ ಮೇರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಭಾನುವಾರ ಸಂಜೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಸವಾರ ಯೋಗೇಶ್, ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನನ್ನು ಬಂಧಿಸಿರುವುದಾಗಿ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ