ಬೆಂಗಳೂರು: ``ರಾಜ್ಯದಲ್ಲಿ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ತರಲು ಸರ್ಕಾರ ಸಕಾರಾತ್ಮಕವಾಗಿದೆ. ಅಲ್ಲದೆ, ಈಗಾಗಲೇ ಕರಡು ಸಿದ್ಧಪಡಿಸಲಾಗಿದೆ,'' ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಕರ್ನಾಟಕ ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ಜಾರಿಗೆ ಒತ್ತಾಯಿಸಿ ಕ್ರಿಯಾ ಸಮಿತಿಯು ಸೋಮವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ``ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಮೌಢ್ಯ ಪ್ರತಿಬಂಧಕ ಕಾಯಿದೆಯನ್ನು ಅಲ್ಲಿಗೇ ತೆರಳಿ ಪರಿಶೀಲಿಸಿದ್ದೇನೆ. ಮುಕ್ತಾ ದಾಭೋಲ್ಕರ್ ಅವರೊಂದಿಗೂ ಸಮಾಲೋಚನೆ ನಡೆಸಿದ್ದೆ. ಆ ಬಳಿಕವಷ್ಟೆ ಸುದ್ದಿಗೋಷ್ಠಿಯಲ್ಲಿ ಮಸೂದೆ ಕುರಿತು ಮಾತನಾಡಿದೆ. ಆಗ ಹಲವರಿಂದ ವಿರೋಧ ವ್ಯಕ್ತವಾಯಿತು. ನಿಡುಮಾಮಿಡಿ ಶ್ರೀಗಳು ನನಗೆ ಧೈರ್ಯ ತುಂಬಿದರು,'' ಎಂದು ತಿಳಿಸಿದರು.
``ಈಗ ಮತ್ತೆ ಕಾಯ್ದೆ ಜಾರಿಗಾಗಿ ಹೋರಾಟ ನಡೆಯುತ್ತಿದೆ. ಹೀಗಾಗಿ, ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯಲ್ಲಿದ್ದ ಕಾಯ್ದೆಯ ಕರಡನ್ನು ಪುನಃ ತರಿಸಿಕೊಳ್ಳಲಾಗಿದೆ. ಕಾನೂನನ್ನು ಜನ ಒಪ್ಪಿದರಷ್ಟೇ ಜಾರಿಗೆ ತರುತ್ತೇವೆ. ಈ ಸಂಬಂಧ ಜಾಗೃತಿ ಮೂಡಿಸಬೇಕು. ಹೀಗಾಗಿ ಕರಡು ಪರಿಷ್ಕರಣೆ ವಿಚಾರವನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು,'' ಎಂದು ತಿಳಿಸಿದರು.
ನಾನೂ ಒಬ್ಬ: ಪ್ರಜಾಪ್ರಭುತ್ವದಲ್ಲಿ ಪರ- ವಿರೋಧ ಸ್ವೀಕಾರವಿದೆ. ಎಲ್ಲರೂ ಮೆಚ್ಚಿ, ನೀತಿ ನಿಯಮವನ್ನು ಅನುಸರಿಸುವ ವಾತಾವರಣ ಸೃಷ್ಟಿಸಿ ಜಾರಿಗೆ ತರುತ್ತೇವೆ. ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಮುತ್ತುಕಟ್ಟುವ ನೀಚ ಆಚರಣೆಗಳನ್ನು ನೋಡಿದ್ದೇನೆ. ಆದ್ದರಿಂದಲೇ ಮೌಢ್ಯ ವಿರೋಧಿಸುವವರಲ್ಲಿ ನಾನು ಒಬ್ಬ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ.
ಮೌಢ್ಯಾಚರಣೆ ಕಾಯಿದೆ ತರಲು ನಾಗರಿಕ ಸಮಾಜ, ಸ್ವಯಂ ಸೇವಾ ಸಂಸ್ಥೆಗಳು, ಪ್ರಾಮಾಣಿಕ ಅಧಿಕಾರಿ ವರ್ಗ, ಕ್ರಿಯಾಶೀಲ ನ್ಯಾಯಾಂಗ ಹಾಗೂ ಮಾಧ್ಯಮದ ಪಾತ್ರ ಅಗತ್ಯವಾಗಿದೆ.
-ನ್ಯಾ. ಶಿವರಾಜ್ ಪಾಟೀಲ್
ಮೌಢ್ಯಾಚರಣೆ ಮಸೂದೆ ಕರಡು ಪರಿಷ್ಕರಣಾ ಸಮಿತಿ ಅಧ್ಯಕ್ಷರು ಮಠಾಧೀಶರು ಜಾತಿವಾದಿಗಳಾಗದೆ, ಮಠದಲ್ಲಿ ಮೌಢ್ಯಾಚರಣೆ ಮಾಡದೆ ಈ ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಬೇಕು. ಸರ್ಕಾರ ಯಾವುದೇ ನಂಬಿಕೆ ಮತ್ತು ಮೂಢನಂಬಿಕೆ ಎಂಬುದನ್ನು ಸ್ಪಷ್ಟಪಡಿಸಬೇಕು.
-ಪ್ರೊ.. ಬರಗೂರು ರಾಮಚಂದ್ರಪ್ಪ
ಹಿರಿಯ ಸಾಹಿತಿ ಮಹಿಳೆಯರು ಟಿವಿ ಮುಂದೆ ಕುಳಿತು ಜ್ಯೋತಿಷ್ಯ ಕಾರ್ಯಕ್ರಮ ನೋಡುವುದರಿಂದ ಮಾಧ್ಯಮಗಳಿಗೆ ಟಿಆರ್‍ಪಿ ರೇಟ್ ಹೆಚ್ಚಾಗಿದೆ. ತಾವು ಚಾನೆಲ್ ನೋಡುವುದಿಲ್ಲ ಎಂದು ಪತ್ರ ಬರೆಯಿರಿ. ಆಗ ಕಾರ್ಯಕ್ರಮಗಳು ಕಡಿಮೆಯಾಗುತ್ತವೆ.
-ಕೆ.ಎಸ್. ವಿಮಲಾ
ಅಧ್ಯಕ್ಷೆ, ಜನವಾದಿ ಮಹಿಳಾ ವೇದಿಕೆ