ಬೆಂಗಳೂರು: ಕಳೆದ ಎರಡೂವರೆ ವರ್ಷಗಳ ಹಿಂದೆ ಚಿಗುರೊಡೆದು ಮೊಳೆತದಲ್ಲಿಯೇ ನಿಂತಿರುವ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಗೆ ಮರುಜೀವ ಬಂದಿದೆ.
ಈ ಕಾಯ್ದೆ ಶೀಘ್ರ ಜಾರಿಗಾಗಿ ನಾಡಿನ ಐವತ್ತಕ್ಕೂ ಹೆಚ್ಚು ಮಠಾಧೀಶರು, ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರು ಹಮ್ಮಿಕೊಂಡಿದ್ದ `ಪರಿವರ್ತನೆಯ ಕಡೆಗೆ ನಮ್ಮ ನಡಿಗೆ' ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಒಕ್ಕೊರಲಿನ ದನಿ ಕೇಳಿಸಿತು. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ `ಕರ್ನಾಟಕ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಒತ್ತಾಯಿಸಿ ಕ್ರಿಯಾ ಸಮಿತಿ'ಯು ಸೋಮವಾರ ಬನ್ನಪ್ಪ ಪಾರ್ಕ್‍ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಪ್ರಸಕ್ತ ಅಧಿವೇಶನದಲ್ಲೇ ಕಾಯ್ದೆ ಜಾರಿಗೆ ಆಗ್ರಹಿಸಿದರು.
`ಸರ್ಕಾರ ಮೌಢ್ಯಾಚರಣೆ ನಿಷೇಧ ಕರಡು ಪರಿಷ್ಕರಿಸಲು ಸಮಿತಿ ರಚಿಸಬೇಕು. ಅಂತಿಮವಾಗಿ ರೂಪುಗೊಂಡ ಕರಡನ್ನು ಸಾರ್ವಜನಿಕ ಚರ್ಚೆಗೆ ಮುಕ್ತಗೊಳಿಸಬೇಕು. ಅಲ್ಲದೆ, ಸರ್ಕಾರವು ಪ್ರಮುಖ ಧರ್ಮಗುರುಗಳು, ಸಮುದಾಯಗಳ ನಾಯಕರು, ರಾಜಕೀಯ ಮುಖಂಡರು ಮತ್ತು ಮಾಧ್ಯಮದವರೊಂದಿಗೆ ಸಮಾಲೋಚಿಸಿ ಏಕಾಭಿಪ್ರಾಯ ಮೂಡಿಸಬೇಕು' ಎಂಬ ನಿರ್ಣಯಗಳನ್ನು ಸಿಪಿಎಂ ಮುಖಂಡ ಜಿ.ಎನ್. ನಾಗರಾಜ್ ಪ್ರಕಟಿಸಿದರು. ಈ ಹಕ್ಕೊತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರಲು ವಿಧಾನಸೌಧಕ್ಕೆ ಪಾದಯಾತ್ರೆ ನಡೆಸುವುದಾಗಿ ಕಾರ್ಯಕ್ರಮದ ಆಯೋಜಕರು ಪ್ರಕಟಿಸಿದರು. ಈ ವಿಷಯವನ್ನು ಪೊಲೀಸ್ ಅಧಿಕಾರಿಗಳು ಸರ್ಕಾರಕ್ಕೆ ಮುಟ್ಟಿಸಿದ ಫಲವಾಗಿ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಸಮಾವೇಶ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಸರ್ಕಾರದ ಪರವಾಗಿ ಮನವಿ ಪತ್ರವನ್ನು ಸ್ವೀಕರಿಸಿದರು. ಇಡೀ ಕಾರ್ಯಕ್ರಮದ ನೇತೃತ್ವವನ್ನು ಮಾನವಧರ್ಮ ಪೀಠದ ನಿಡುಮಾಮಿಡಿ ಚನ್ನಮಲ್ಲ ಸ್ವಾಮೀಜಿ ವಹಿಸಿದ್ದರು.
ಶಾಸ್ತ್ರ-ಶಸ್ತ್ರಗಳಿಂದ ಸತ್ಯಕ್ಕೆ ಧಕ್ಕೆ- ಪಂಡಿತಾರಾಧ್ಯ: ಸತ್ಯದ ಪರ ಮಾತನಾಡುವವರನ್ನು ಶಾಸ್ತ್ರ ಮತ್ತು ಶಸ್ತ್ರಗಳು ನಿಯಂತ್ರಿಸುತ್ತಿವೆ. ಶಸ್ತ್ರವೆಂಬ ಆಡಳಿತ ವರ್ಗ ಮತ್ತು ಶಾಸ್ತ್ರವೆಂಬ ಪುರೋಹಿತ ವರ್ಗಗಳು ಇಂದು ಸತ್ಯ ಹೇಳುವವರನ್ನು ಅತ್ಯಂತ ಆಳಕ್ಕೆ ತಳ್ಳುತ್ತಿವೆ ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು. ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರಾಜ್ಞರು ಸತ್ಯದ ಪರ ನಿಲ್ಲಬೇಕು. ವ್ಯಕ್ತಿಗೆ ಗುಂಡಿಕ್ಕಬಹುದೆ ವಿನಃ ಆತನ ವಿಚಾರಗಳಿಗಲ್ಲ ಎಂಬುದನ್ನು ಈ ಶಸ್ತ್ರ, ಶಾಸ್ತ್ರ ವರ್ಗಗಳು ಮನಗಾಣಬೇಕು. ಮಠಾಧೀಶರು ಮೊದಲು ತಮ್ಮ ತಮ್ಮ ಮಠಗಳಲ್ಲಿನ ಮೌಢ್ಯಾಚರಣೆಗೆ ತಡೆಯೊಡ್ಡಿ ಬಳಿಕ ಸಮಾಜದ ಕಟ್ಟುವಿಕೆಗೆ ಪದಾರ್ಪಣೆ ಮಾಡಬೇಕು. ಸಮಾಜದಲ್ಲಿ ವಿಜೃಂಭಿಸುತ್ತಿರುವ ಮಾನಸಿಕ ಭಯೋತ್ಪಾದಕರನ್ನು ನಿಯಂತ್ರಿಸಬೇಕು ಎಂದು ಹೇಳಿದರು.
ಕಾಯ ಕೈಲಾಸವಾಗಿಲ್ಲ: ದೇಮ
ಇಂದು ಸಾವಿಗೆ ಬೆಲೆ ಇಲ್ಲದಂತಾಗಿದೆ. ಒಬ್ಬರ ಕಾಯಕಕ್ಕೆ ಬೆಲೆ ಇದ್ದರೆ, ಮತ್ತೊಬ್ಬರ ಕಾಯಕಕ್ಕೆ ಬೆಲೆ ಇಲ್ಲ. ಅಂದಮೇಲೆ ಕಾಯಕವೇ ಕೈಲಾಸವಾಗಿದೆ ಎನ್ನುವ ಮಾತೆಲ್ಲಿಂದ ಬರುತ್ತದೆ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು. ಕಾಯ ಇಂದು ಮಾರಾಟದ ವಸ್ತುವಾಗಿದೆ. ಅದೊಂದೆ ಅಲ್ಲ ಈ ದೇಹ, ಮನಸ್ಸು, ಆತ್ಮ, ದೇವರು, ಆಧ್ಯಾತ್ಮ ಎಲ್ಲವೂ ಮಾರಾಟದ ವಸ್ತುವಾಗಿವೆ. ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಈ ಜಗತ್ತು ಮಾರುಕಟ್ಟೆಯಾಗಿದೆ. ಮನುಷ್ಯ ಮೌಢ್ಯಗಳಿಂದ ದಿಕ್ಕೆಟ್ಟು ಓಡುತ್ತಿದ್ದಾನೆ. ನಿಷೇಧ ಮಾಡಬೇಕಾದದ್ದು ಯಾವುದು, ಶಿಕ್ಷಣ ನೀಡುವಂತದ್ದು ಯಾವುದು ಎಂಬುದನ್ನು ಸ್ಪಷ್ಟಪಡಿಸಿ ಮೌಢ್ಯಾಚರಣೆ ಕಾಯಿದೆಯನ್ನು ಜಾರಿಗೆ ತರಬೇಕಿದೆ ಎಂದರು.
ಸಮಾವೇಶದ ವಿಶೇಷತೆಗಳು: ನಗರದಲ್ಲಿ ಸುರಿಯುತಿರುವ ಜಿಟಿಜಿಟಿ ಮಳೆ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆಯನ್ನು ಕಾಡಿತು. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಮಳೆಗೆ ಜಗ್ಗದೆ ಕಾರ್ಯಕ್ರಮದಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡಿದ್ದರು. ವಿಚಾರವಾದಿ ಪ್ರೊ.ಕೆ. ಎಸ್. ಭಗವಾನ್ ಬೆಳಗ್ಗೆ 11ಕ್ಕೆ ಆಗಮಿಸಿದರು. ಬಹಿರಂಗ ಸಭೆ ಮಧ್ಯಾಹ್ನ 1ಕ್ಕೆ ಇದ್ದುದ್ದರಿಂದ ಸಮಯಪ್ರಜ್ಞೆ ಮೆರೆದ ಪೊಲೀಸರು ಭಗವಾನ್ ಅವರನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ದರು. ಅದೇ ಪೊಲೀಸರು ವೇದಿಕೆ ಅವರನ್ನು ಕರೆತಂದರು. ನಂತರ 10 ನಿಮಿಷ ಕಾಲ ವೇದಿಕೆಯಲ್ಲಿದ್ದ ಭಗವಾನ್ ನಿರ್ಗಮಿಸಿದರು.
ಡಾ.ಕೆ.ಮರುಳಸಿದ್ದಪ್ಪ, ಡಾ.ವಸುಂದರ ಭೂಪತಿ, ಡಾ.ಸಿ.ಎಸ್.ದ್ವಾರಕನಾಥ್, ಎಸ್.ಜಿ. ಸಿದ್ದರಾಮಯ್ಯ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಚಂದ್ರಶೇಖರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಸೇರಿದಂತೆ ಸಾಹಿತಿಗಳು, ಪ್ರಗತಿಪರ ಚಿಂತಕರು ಭಾಗವಹಿಸಿದ್ದರು. ಶಾಸಕರ ಪೈಕಿ ಕೆ. ಎಸ್.ಪುಟ್ಟಣ್ಣಯ್ಯ, ಬಿ.ಆರ್. ಪಾಟೀಲ್ ಭಾಗವಹಿಸಿದ್ದರು.