ನಮ್ಮ ಮೆಟ್ರೋ ಹೆಸರು ಬದಲಾವಣೆ: ಮರುನಾಮಕರಣ ಮಾಡುವುದಾಗಿ ಸಿಎಂ ಘೋಷಣೆ (ಫೋಟೋ ಕೃಪೆ: ಕೆಪಿಎನ್) 
ಜಿಲ್ಲಾ ಸುದ್ದಿ

ನಮ್ಮ ಮೆಟ್ರೋ ಹೆಸರು ಬದಲಾವಣೆ: ಮರುನಾಮಕರಣ ಮಾಡುವುದಾಗಿ ಸಿಎಂ ಘೋಷಣೆ

ನಮ್ಮ ಮೆಟ್ರೋ' ಹೆಸರನ್ನು `ಕೆಂಪೇಗೌಡ ಮೆಟ್ರೋ' ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ...

ಬೆಂಗಳೂರು: ನಮ್ಮ ಮೆಟ್ರೋ' ಹೆಸರನ್ನು `ಕೆಂಪೇಗೌಡ ಮೆಟ್ರೋ' ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸೋಮವಾರ ಸಂಜೆ ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತ್‍ಕುಮಾರ್
ಹಾಗೂ ಮೇಯರ್ ಮಂಜುನಾಥ ರೆಡ್ಡಿ ಅವರು ಪೂರ್ವ-ಪಶ್ಚಿಮ ಪಥದ ಮಾರ್ಗ `ರೀಚ್ -2' (ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗ) ಹಸಿರು ನಿಶಾನೆ ತೋರಿದರು. ಈ ವೇಳೆ ಸಿಎಂ ಅವರು ಮೆಟ್ರೋಗೆ ಮರುನಾಮಕರಣ ಮಾಡುವ ಸಂಗತಿಯನ್ನು ಘೋಷಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಮ ``ಈಗಾಗಲೇ ನಗರದ 2 ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿದೆ. ಇದು 3ನೇ ಮಾರ್ಗ. ಮೊದಲ ಹಂತ (ಒಟ್ಟು 42.3ಕಿ.ಮೀ)ದಲ್ಲಿ ಇನ್ನೂ 15 ಕೀ.ಮೀ.ಕಾಮಗಾರಿ ಬಾಕಿ ಉಳಿದಿದೆ. ಈಗ 27 ಕಿ.ಮೀ. ಸಂಚಾರಕ್ಕೆ ಮುಕ್ತವಾಗಿದೆ. ಹಲವು ತಾಂತ್ರಿಕ ದೋಷಗಳಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಒಟ್ಟಾರೆ ಮೊದಲ ಹಂತವನ್ನು ಮುಂದಿನ ಜೂನ್ ವೇಳೆಗೆ ಪ್ರಯಾಣಿಕರಿಗೆ ಮುಕ್ತಗೊಳಿಸಲಾಗುವುದು,'' ಎಂದು ಭರವಸೆ ನೀಡಿದರು.

ಮೊದಲ ಹಂತದ ಕಾಮಗಾರಿಗೆ ರು. 13,850 ಕೋಟಿ ವೆಚ್ಚವಾಗಿದೆ. ಅದರಲ್ಲಿ ರಾಜ್ಯ ಸರ್ಕಾರದ ಪಾಲು ರು.5,980 ಕೋಟಿ. ಇದಕ್ಕೆ ಜಪಾನ್ ಹಾಗೂ ಫ್ರಾನ್ಸ್ ದೇಶಗಳೂ ಆರ್ಥಿಕ ನೆರವು ನೀಡಿವೆ. 2ನೇ ಹಂತದ ಕಾಮಗಾರಿ 72 ಕಿ.ಮೀ.ಉದ್ದವಿದ್ದು, ಅದಕ್ಕೆ ರು.26,440 ಕೋಟಿ ವೆಚ್ಚವಾಗಲಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆದಿದ್ದು, 2020 ವೇಳೆಗೆ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುವುದು. 1 ಮತ್ತು 2ನೇ ಹಂತದ ಕಾಮಗಾರಿ ಮುಕ್ತಾಯಗೊಂಡರೆ ನಗರದ ಸಾರಿಗೆ ಸಮಸ್ಯೆಗೆ ಪರಿಹಾರ ಸಿಗಲಿದೆ,'' ಎಂದು ತಿಳಿಸಿದರು.

ಬುಧವಾರದಿಂದ ಸಂಚಾರ: ಮೆಟ್ರೊ ಟರ್ಮಿ ನಲ್ ರೀಚ್-2 (ಕಡುನೇರಳೆ ಮಾರ್ಗ) ನಲ್ಲಿ ಸಣ್ಣಪುಟ್ಟ ವಿದ್ಯುತ್ ಕಾಮಗಾರಿ ನಡೆಯುತ್ತಿದೆ. ಅದು ಸಂಪೂರ್ಣ ಮುಕ್ತಾಯವಾಗಲು ಒಂದೆರಡು ದಿನ ಬೇಕಿದೆ. ಅದು ಪೂರ್ಣಗೊಂಡ ಬಳಿಕ, ಬುಧವಾರದಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ಅಂದು ಸಂಜೆ 4 ಗಂಟೆ ನಂತರ ಈ ಮಾರ್ಗ ಪ್ರಯಾಣಿಕರ ಸಂಚಾರಕ್ಕೆ ರೈಲು ತೆರೆದುಕೊಳ್ಳಲಿದ್ದು, ಗ್ರಾಫಿಕ್ಸ್ ಕಿರಿಕಿರಿ ಇಲ್ಲದೆ ಆರಾಮವಾಗಿ ಸಂಚರಿಸಬಹುದು ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ.

ತಾಂತ್ರಿಕ ದೋಷ: ಮೆಟ್ರೋ ರೈಲು ಸೋಮವಾರ ಲೋಕಾರ್ಪಣೆಗೊಂಡ ಕೆಲವೇ ಸೆಕೆಂಡ್‍ಗಳಲ್ಲಿ ತಾಂತ್ರಿಕ ದೋಷ ದಿಂದ ಸ್ಥಗಿತಗೊಂಡಿತ್ತು. ಮಾಗಡಿ ರಸ್ತೆಯಲ್ಲಿ ಸಂಜೆ ಸುಮಾರು 4.30ರ ವೇಳೆಗೆ ಗಣ್ಯರು ಹಸಿರು ನಿಶಾನೆ ತೋರಿದರು. ನಂತರ ಅದೇ ರೈಲು ಮೈಸೂರು ರಸ್ತೆ(ನಾಯಂಡಹಳ್ಳಿ) ಕಡೆಗೆ ಸಾಗಿತು. ಸಮಯ 4.44ಕ್ಕೆ ಹೊರಟ ರೈಲು 45 ಸೆಕೆಂಡುಗಳಲ್ಲೇ ನಿಂತಿತು. ಇದರಿಂದ ಕ್ಷಣಕಾಲ ಗಣ್ಯರು ಗೊಂದಲಕ್ಕೀಡಾ ದರು. ತಕ್ಷಣ ತಾಂತ್ರಿಕ ದೋಷದಿಂದ ರೈಲು ನಿಂತಿದೆ. ಯಾರೂ ಭಯಪಡಬಾರದು ಎಂದು ಸಿಬ್ಬಂದಿ ಮೈಕ್‍ನಲ್ಲಿ ಮಾಹಿತಿ ನೀಡಿದ ಕೆಲವು ನಿಮಿಷದಲ್ಲಿ ಮತ್ತೆ ರೈಲು ಪ್ರಯಾಣ ಮುಂದುವರಿಸಿತು.

12 ರಿಂದ 15 ನಿಮಿಷ ಪ್ರಯಾಣ: ಸಾಮಾನ್ಯವಾಗಿ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ವಾಹನಗಳಲ್ಲಿ ಸಂಚರಿಸಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಅದರಲ್ಲೂ ಬೆಳಗ್ಗೆ-ಸಂಜೆ ವೇಳೆ ಸಂಚರಿಸುವ ಪ್ರಯಾಣಿಕರ ಸ್ಥಿತಿ ಅಧೋಗತಿ. ಆದರೆ, ಮೆಟ್ರೋ ರೈಲಿನಲ್ಲಿ ಈ ಮಾರ್ಗದಲ್ಲಿ ಕ್ರಮಿಸಲು ಕೇವಲ 12ರಿಂದ 15 ನಿಮಿಷ ಸಾಕು. ಅಭಿವೃದ್ಧಿಗೆ ಕೈಜೋಡಿಸೋಣ: ಕೇಂದ್ರ ನಗರಾಭಿವೃದ್ಧಿಸಚಿವ ವೆಂಕಯ್ಯ ನಾಯ್ಡು ಮಾತನಾಡಿ, ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡೋಣ. ಅದಕ್ಕೆ ಕೇಂದ್ರ ಅಗತ್ಯ ನೆರವು ನೀಡಲಿದೆ. ನಗರದಲ್ಲಿ ಮೆಟ್ರೋ ಮೈಲಿಗಲ್ಲು ಸಾಧಿಸಿದೆ. ದೆಹಲಿ ಮೆಟ್ರೋ ನಿಲ್ದಾಣವೊಂದಕ್ಕೆ ಸರ್. ಎಂ.ವಿಶ್ವೇಶ್ವರಯ್ಯ ಅವರ ಹೆಸರಿಡಲಾಗಿದೆ. ಅದೇ ರೀತಿ ನಗರದಲ್ಲಿ ಅಂತಹ ಮಹಾನ್ ವ್ಯಕ್ತಿಗಳ ಹೆಸರಿಡಲು ತಮ್ಮಿಂದ ತಕರಾರಿಲ್ಲ ಎಂದು ಹೇಳಿದರು.

ಮುಂದಿನ ಕಾಮಗಾರಿ ಶೀಘ್ರ ನಡೆಯಲಿ: ಸಂಸದ ರಾಜೀವ್ ನಾಗರಿಕರು ಆಧುನಿಕ, ತ್ವರಿತ ಮತ್ತು ಕಡಿಮೆ ವೆಚ್ಚದ ಪ್ರಯಾಣ ಮಾಡಬಹುದಾದ ಸಂಪರ್ಕ ಸೇವೆ ಹುಡುಕುತ್ತಿರುವ ಈ ಸಂದರ್ಭದಲ್ಲಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ನಮ್ಮ ಮೆಟ್ರೋ ರೀಚ್ 2 ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಟ್ಟ ನಮ್ಮ ಮೆಟ್ರೋ ತಂಡಕ್ಕೆ ಅಬಿsನಂದಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.

ಮೆಟ್ರೋ ಸಂಪರ್ಕ ಕಾಮಗಾರಿಯು ನಿರೀಕ್ಷೆಗಿಂತ ತಡವಾಗಿರಬಹುದು, ಮುಂದಿನ ಹಂತದ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತದೆಂಬ ವಿಶ್ವಾಸವಿದೆ. ಅಂದಾಜು 42.30 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿ ಸಂಪೂರ್ಣಗೊಂಡು ಪೂರ್ಣ ಪ್ರಮಾಣದ ಸೇವೆ ಆರಂಭವಾದ ನಂತರ ಮೆಟ್ರೋ ಬಳಕೆಯ ನೈಜ ಪ್ರಭಾವ ಎದ್ದು ಕಾಣುತ್ತದೆ. ಬೆಳೆಯುತ್ತಿರುವ ಬೆಂಗಳೂರು ಸಂಚಾರ ವ್ಯವಸ್ಥೆಯಲ್ಲಿ ಪರಿಹಾರ ಕೊರತೆ ಎದುರಿಸುತ್ತಿದೆ ಎಂದು ಅವರು ವಿಷಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ