ಆರೋಪಿ ಭುವಿತ್ ಶೆಟ್ಟಿಯನ್ನು ಕರೆತರುತ್ತಿರುವಪ ಪೊಲೀಸರು
ಮಂಗಳೂರು: ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ಹರೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಿಂದೂ ಸಂಘಟನೆಯ ಕಾರ್ಯಕರ್ತ ಭುವಿತ್ ಶೆಟ್ಟಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರಿಗೆ ಈ ಕುರಿತು ವಿವರ ನೀಡಿದರು. ಪ್ರಮುಖ ಆರೋಪಿಯಾಗಿರುವ ರೌಡಿ ಶೀಟರ್ ಭುವಿತ್ ಶೆಟ್ಟಿ (25) ವಿರುದ್ಧ ಈ ಹಿಂದೆ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಬಗ್ಗೆ ವಾಟ್ಸ್ ಆ್ಯಪ್‍ನಲ್ಲಿ ಕಮೆಂಟ್ ಹಾಕಿದ್ದಕ್ಕೆ ಪ್ರಕರಣ ದಾಖಲಾಗಿತ್ತು. ಅಲ್ಲದೆ ಇನ್ನೂ ಮೂರು ಪ್ರಕರಣಗಳಿವೆ.
ಹೀಗಾಗಿ ಆತನ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿತ್ತು ಎಂದು ತಿಳಿಸಿದರು. ಅಚ್ಯುತ (28) ಇನ್ನೊಬ್ಬ ಬಂಧಿತ ಆರೋಪಿ. ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳಿದ್ದಾರೆ. ಇನ್ನೂ ಮೂವರು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಇವರೆಲ್ಲರೂ ಹಿಂದೂ ಸಂಘಟನೆಗಳ ಜತೆ ಗುರು ತಿಸಿಕೊಂಡಿದ್ದಾರೆ ಎಂದು ಐಜಿಪಿ ಹೇಳಿದರು.
ಘಟನೆ ವಿವರ: ನ.12ರಂದು ರಾತ್ರಿ 7.30ಕ್ಕೆ ಬಂಟ್ವಾಳದ ಹಳೆಗೇಟು ಬಳಿ ಸಮೀವುಲ್ಲಾ ಮತ್ತು ಹರೀಶ್ ಸವಾರಿ ಮಾಡುತ್ತಿದ್ದ ಬೈಕ್‍ನ್ನು ಕಾರಿನಲ್ಲಿ ಬಂದ ಆರೋಪಿಗಳು ಅಡ್ಡಗಟ್ಟಿದ್ದರು. ಬಳಿಕ ಇಬ್ಬರಿಗೂ ಚೂರಿಯಿಂದ ಮಾರಣಾಂತಿಕವಾಗಿ ಇರಿದು ಪರಾರಿಯಾಗಿದ್ದರು.
ತೀವ್ರ ಗಾಯಗೊಂಡ ಹರೀಶ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಮೀವುಲ್ಲಾ ಒಳರೋಗಿಯಾಗಿ ದಾಖಲಾಗಿ ಚೇತರಿಸಿಕೊಂಡಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಬಂಟ್ವಾಳ ಎಎಸ್ಪಿ ಮತ್ತು ಜಿಲ್ಲಾ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಇನ್ಸ್‍ಪೆಕ್ಟರ್ ಮತ್ತು ಡಿಸಿಐಬಿ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಫೇಸ್‍ಬುಕ್ ಕಮೆಂಟರ್: ಬಂಧಿತ ಆರೋಪಿ ಭುವಿತ್ ಶೆಟ್ಟಿ ಈ ಹಿಂದೆ ಫೇಸ್ ಬುಕ್‍ನಲ್ಲಿ ಸಾಮಾಜಿಕ ಅಸಹಿಷ್ಣುತೆಯ ಕಾಮೆಂಟ್ ಹಾಕಿದ್ದಕ್ಕೆ ಕೇಸು ದಾಖಲಾಗಿಕೇಸು ದಾಖಲಾಗಿ ಬಂಧಿತನಾಗಿದ್ದ. ಕಲಬುರ್ಗಿ ಸಾವನ್ನು ಲೇವಡಿ ಮಾಡಿದ್ದನಲ್ಲದೆ, ಇದೇ ರೀತಿ ಭಗವಾನ್ ಗೂ ಕಾದಿದೆ ಎಂಬರ್ಥದಲ್ಲಿ ತನ್ನ ಫೇಸ್‍ಬುಕ್‍ನಲ್ಲಿ ಕಾಮೆಂಟ್ ಹಾಕಿದ್ದ.
ಇದರ ಬಗ್ಗೆ ವ್ಯಾಪಕ್ ವಿರೋಧ ವ್ಯಕ್ತವಾಗಿತ್ತಲ್ಲದೆ, ಮಂಗಳೂರು ಎಸ್ಪಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ನಂತರ ಆರೋಪಿ ಭುವಿತ್ ಶೆಟ್ಟಿಯನ್ನು ಬಂಧಿಸಿ ಪ್ರಕರಣವನ್ನು ಬಂಟ್ವಾಳ ಠಾಣೆಗೆ ಹಸ್ತಾಂತರಿಸಲಾಗಿತ್ತು.