ಬೆಂಗಳೂರು: ಲೋಕಾಯುಕ್ತ ಪದಚ್ಯುತಿ ನಿರ್ಣಯಕ್ಕೆ ಅಂಗೀಕಾರ ದೊರೆತರೆ ನ್ಯಾ.ಭಾಸ್ಕರ್‍ರಾವ್ ಅವರಿಗೆ ಕಾನೂನು ರೀತ್ಯ ಅವರು ನಿರ್ವಹಿಸಬಹುದಾದ ಎಲ್ಲ ಕರ್ತವ್ಯ ಮತ್ತು ಚಲಾಯಿಸಬಹುದಾದ ಅಧಿಕಾರಕ್ಕೆ ಸೋಮವಾರದಿಂದಲೇ ಕತ್ತರಿ ಪ್ರಯೋಗವಾಗುತ್ತದೆ.
ಕಳೆದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಲೋಕಾಯುಕ್ತ ಕಾಯ್ದೆಗೆ ತಂದಿರುವ ತಿದ್ದುಪಡಿ ಪ್ರಕಾರ, ಪದಚ್ಯುತಿ ನಿರ್ಣಯ ಮಂಡನೆಯಾದ ಕ್ಷಣದಿಂದ ಲೋಕಾಯುಕ್ತರು ತಮ್ಮ ಹಕ್ಕು ಮತ್ತು ಕರ್ತವ್ಯ ಕಳೆದುಕೊಳ್ಳುತ್ತಾರೆ.
ಅಂದರೆ ಒಂದರ್ಥದಲ್ಲಿ ಅವರು ಅಮಾನತುಗೊಂಡ ಸರ್ಕಾರಿ ಅಧಿಕಾರಿಗೆ ಸಮಾನ ! ಹೆಸರಿಗೆ ಲೋಕಾಯುಕ್ತರು ಆದರೆ ಯಾವುದೇ ಅಧಿಕಾರ ಇರುವುದಿಲ್ಲ. ಹೊಸ ಕಾಯ್ದೆ ಪ್ರಕಾರ ನಿರ್ಣಯ ಅಂಗೀಕಾರವಾದ ಬಳಿಕ ಗೊತ್ತುವಳಿಯನ್ನು ಸದನದ ಆಸ್ತಿಯಾಗಿ ಬಾಕಿ ಇಟ್ಟುಕೊಂಡು ಲೋಕಾಯುಕ್ತರ ಪದಚ್ಯುತಿ ನಿರ್ಣಯದ ತನಿಖೆ ನಡೆಸುವಂತೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕೋರುತ್ತಾರೆ. ವಿಧಾನ ಪರಿಷತ್‍ನಲ್ಲೂ ನಿರ್ಣಯ ಅಂಗೀಕಾರವಾದರೆ ಜಂಟಿಯಾಗಿ ನಿರ್ಣಯವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸುವುದಕ್ಕೆ ಅವಕಾಶವಿದೆ.
ಇದಾದ ಬಳಿಕ ಮುಖ್ಯ ನ್ಯಾಯಮೂರ್ತಿಗಳು ಅಥವಾ ಅವರು ತನಿಖೆಗೆ ನಿಯೋಜಿಸುವ ಹೈ ಕೋರ್ಟ್ ನ್ಯಾಯಾಧೀಶರ ಸಮಿತಿ ಲೋಕಾಯುಕ್ತರ ವಿರುದ್ಧದ ಆರೋಪವನ್ನು ತನಿಖೆ ನಡೆಸಿದ ದೋಷಾರೋಪ ಪಟ್ಟಿ ತಯಾರು ಮಾಡಬೇಕಾಗುತ್ತದೆ. ಜತೆಗೆ ನಿಮ್ಮ ವಿರುದ್ಧ ಈ ರೀತಿಯ ಚಾರ್ಜ್ ಗಳನ್ನು ಮಾಡಲಾಗಿದೆ. ಈ ಬಗ್ಗೆ ಲಿಖಿತರಕ್ಷಣಾ ಹೇಳಿಕೆ ನೀಡುವಂತೆ ಕೋರಬಹುದು.
ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆ ರೀತಿ ಲೋಕಾಯುಕ್ತರಿಗೆ ತನ್ನ ಪರವಾಗಿ ವಾದ ಮಾಡುವುದಕ್ಕೆ ವಕೀಲರನ್ನು ನೇಮಿಸಿಕೊಳ್ಳುವುದಕ್ಕೂ ಅವಕಾಶವಿದ್ದು, ಪಾಟಿ ಸವಾಲು ನಡೆಸಬಹುದು.
ಇದೆಲ್ಲದರ ಆಧಾರದ ಮೇಲೆ ನ್ಯಾಯಾಧೀಶರ ಸಮಿತಿ ವರದಿ ತಯಾರಿಸಿ, ಅದರಲ್ಲಿ ಲೋಕಾಯುಕ್ತರ ವಿರುದ್ಧದ ಆರೋಪ ನಿಜವೇ ? ದುರ್ವರ್ತನೆ ಅಥವಾ ತಪ್ಪಿತಸ್ಥ ಹೌದೋ, ಅಲ್ಲವೋ ಎಂಬ ಬಗ್ಗೆ ಸ್ಪೀಕರ್‍ಗೆ ವರದಿ ನೀಡುತ್ತಾರೆ. ಆ ವರದಿಯಲ್ಲಿ ನ್ಯಾಯಾಧೀಶರ ಸಮಿತಿ ಲೋಕಾಯುಕ್ತರಿಗೆ ಕ್ಲೀನ್‍ಚಿಟ್ ನೀಡಿದರೆ ಅವರ ವಿರುದ್ಧ ವಿಧಾನ ಮಂಡಲದಲ್ಲಿ ಲೋಕಾಯುಕ್ತರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ದುರ್ವರ್ತನೆ ಸಾಬೀತಾದರೆ, ವರದಿಯನ್ನು ರಾಜ್ಯಪಾಲರಿಗೆ ಕಳುಹಿಸಿ ಹುದ್ದೆಯಿಂದ ವಜಾಗೊಳಿಸಲಾಗುತ್ತದೆ.