ಬೆಂಗಳೂರು: ರಸ್ತೆ ತುಂಬೆಲ್ಲಾ ಗುಂಡಿಗಳು, ಹದಗೆಟ್ಟ ರಸ್ತೆಗಳು, ಬಸ್ ನಿಲ್ದಾಣಗಳಿಲ್ಲ, ಸಾರ್ವಜನಿಕ ಶೌಚಾಲಯಗಳಿಲ್ಲ.. ಹೀಗೆ ಒಂದಲ್ಲ ಎರಡಲ್ಲ ಹಲವಾರು ಸಮಸ್ಯೆಗಳದ್ದೇ ಸರಮಾಲೆ.
ಇದು ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಜನ ಎದುರಿಸುತ್ತಿರುವ ಸಮಸ್ಯೆಗಳು. ಈ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ. ಸಂಬಂಧಪಟ್ಟ ಪಾಲಿಕೆ ಸದಸ್ಯರು, ಶಾಸಕರು ಸೇರಿದಂತೆ ಪ್ರತಿಯೊಬ್ಬ ಅಧಿಕಾರಿಯನ್ನೂ ಭೇಟಿ ಮಾಡಿ ತಮ್ಮ ಸಮಸ್ಯೆ ಬಗೆಹರಿಸಿ ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಈ ಹಿನ್ನೆಲೆಯಲ್ಲಿ ನ.30ರಂದು (ಸೋಮವಾರ) ಈ ಭಾಗದ ಜನ ಅಗತ್ಯ ಮೂಲಸೌಕರ್ಯಕ್ಕೆ ಆಗ್ರಹಿಸಿ `ಸೇವ್ ವೈಟ್ ಫೀಲ್ಡ್' ಎಂಬ ಘೋಷವಾಕ್ಯದಡಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ
ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಶ್ರೀನಿವಾಸ ರೆಡ್ಡಿ, ವೈಟ್ ಫೀಲ್ಡ್, ಹೂಡಿ, ನಲ್ಲೂರ ಹಳ್ಳಿ, ಇಮ್ಮಡಹಳ್ಳಿ, ವರ್ತೂರು, ಕಾಡುಗೋಡಿ ಸೇರಿದಂತೆ ಸುತ್ತಮುತ್ತಲ ನಿವಾಸಿಗಳು ಮೂಲಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಈ ಭಾಗದ ಜನರ ಸಮಸ್ಯೆ ಇಂದು ನಿನ್ನೆಯದಲ್ಲ ಆದರೂ ಸಮಸ್ಯೆ ಬಗೆಹರಿಸುವಲ್ಲಿ ಇಲ್ಲಿನ ಸ್ಥಳೀಯ ಮುಖಂಡರು ವಿಫಲರಾಗಿದ್ದಾರೆ.
ಈ ಭಾಗದಲ್ಲಿ ಹೆಚ್ಚಾಗಿ ಐಟಿ-ಬಿಟಿ ಕಂಪನಿಗಳಿವೆ. ಕೆಲಸಕ್ಕೆ ಹೋಗುವವರು ಹಾಗೂ ಶಾಲೆಗೆ ಹೋಗುವ ಮಕ್ಕಳು ರಸ್ತೆ ಮೇಲೆ ಗಂಟೆಗಟ್ಟಲೆ ಸಮಯ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ತುಂಬೆಲ್ಲಾ ಆಳವಾದ ಗುಂಡಿಗಳೇ ಇವೆ. ಗುಂಡಿಗಳು ಹೀಗೆ ಇದ್ದಲ್ಲಿ ಅಪಘಾತ ಸಂಭವಿಸುವುದು ಖಚಿತ ಎಂಬ ಆತಂಕ ಅವರದು. ಕೊನೆ ಪಕ್ಷ ಗುಂಡಿಗಳನ್ನಾದರೂ ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಈ ಭಾಗದ ಅರ್ಧ ಜನರ ಸಮಸ್ಯೆ ನಿವಾರಿಸಿದಂತಾಗುತ್ತದೆ. ರಸ್ತೆಗಳಲ್ಲಿನ ಗುಂಡಿಗಳಿಂದ ಕಿ.ಮೀ.ಗಟ್ಟಲೆ ವಾಹನಗಳು ರಸ್ತೆಯಲ್ಲಿ ನಿಂತಿರುತ್ತವೆ. ಮುಂದೆ ಸಂಚರಿಸಲು ಹೆಣಗಾಡುವ ಸ್ಥಿತಿ ಎದುರಾಗಿದೆ. 1 ಗಂಟೆ ಕ್ರಮಿಸುವ ರಸ್ತೆಯಲ್ಲಿ ಮೂರ್ನಾಲ್ಕು ಗಂಟೆ ಕ್ರಮಿಸಬೇಕು.
ಈ ಅವ್ಯವಸ್ಥೆಯಿಂದ ವಾಹನಗಳು ಮಾತ್ರವಲ್ಲ, ಆ ಮಾರ್ಗದಲ್ಲಿ ಸಂಚರಿಸುವ ಆ್ಯಂಬುಲೆನ್ಸ್‍ಗಳು ಸಹ ಆಸ್ಪತ್ರೆಗೆ ಸೇರಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಗಳಿದ್ದರೂ ಈ ಭಾಗದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಹೆಚ್ಚಿರುತ್ತದೆ. ಒಟ್ಟಾರೆ ಅಧಿಕಾರಿಗಳು ನಾವು ಪ್ರತಿಭಟಿಸಿದಾಗ ಮಾತ್ರ ಕಣ್ಣೊರೆಸುವ ತಂತ್ರವಾಡುತ್ತಾರೆ.
ನಂತರ ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ. ಜನರ ಕಣ್ಣೊರೆಸುವ ತಂತ್ರ ಬಿಟ್ಟು ಇನ್ನಾದರೂ ಸಮಸ್ಯೆ ಬಗೆಹರಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳೇ ಹಾಗೂ ಜನಪ್ರತಿನಿಧಿಗಳ ಕಣ್ತೆರೆಸಲು ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಸ್ಥಳೀಯರು ಹಾಗೂ ಸಾಫ್ಟ್ ವೇರ್ ಕಂಪನಿ ಉದ್ಯೋಗಿಗಳು ಭಾಗವಹಿಸಲಿದ್ದಾರೆ. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮ ಮನವಿಯನ್ನು ಮತ್ತೆ ಸಲ್ಲಿಸಲಾಗುವುದು ಎಂದು ತಿಳಿಸಿದರು.