ಬೆಂಗಳೂರು: ಕರ್ನಾಟಕದ ಸರ್ಕಾರಿ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ 1,400 ಶುಶ್ರೂಷಕರ ಹುದ್ದೆಗಳ ನೇಮಕ ಪ್ರಕ್ರಿಯೇ ಆರಂಭವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಹಿಂದೆ ನೀಡಿದ್ದ ಅಧಿಸೂಚನೆಯಲ್ಲಿ, ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಶೇ. 85 ಅಂಕಗಳನ್ನು ಮತ್ತು ಸಂದರ್ಶನದಲ್ಲಿ ಅವರು ಗಳಿಸುವ ಶೇಕಡ 15 ಅಂಕಗಳನ್ನು ಪರಿಗಣಿಸಿ ನೇಮಕಕ್ಕೆ ನಿರ್ಧರಿಸಲಾಗಿತ್ತು. ಇದೀಗ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ನೀಡಿರುವ ಸೂಚನೆ ಮೇರೆಗೆ ಈಗಾಗಲೇ ಪ್ರಕಟಿಸಿರುವ ಅಧಿಸೂಚನೆಗೆ ಪ್ರಾಧಿಕಾರವು ತಿದ್ದುಪಡಿ ತಂದಿದೆ. ಅದರಂತೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೂಲಕವೇ ಸಂಪೂರ್ಣ ಶೇ.100 ಆಯ್ಕೆ ಪ್ರಕ್ರಿಯೇಯನ್ನು ಕೈಗೊಳ್ಳಲಾಗುವುದು. ಹೀಗಾಗಿ ಸಂದರ್ಶನ ಇರುವುದಿಲ್ಲ. ಉಳಿದಂತೆ ಅಧಿಸೂಚನೆಯಲ್ಲಿ ನೀಡಿರುವ ಸೂಚನೆ, ಮಾರ್ಗದರ್ಶನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಮತ್ತಷ್ಟು ಹುದ್ದೆಗಳ ಸೇರ್ಪಡೆ: ಕರ್ನಾಟಕದ ಸರ್ಕಾರಿ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಶುಶ್ರೂಷಕರ ಹುದ್ದೆಗಳ ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಇದೀಗ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಸೂಚನೆಯ ಮೇರೆಗೆ ಇನ್ನೂ ಎರಡು ಸಂಸ್ಥೆಗಳಾದ ರಾಯಚೂರು ವೈದ್ಯಕೀಯ ಜ್ಞಾನ ಸಂಸ್ಥೆಯಲ್ಲಿ 201 ಶುಶ್ರೂಷಕರ ಹುದ್ದೆಗಳು ಹಾಗೂ ಮಂಡ್ಯ ವೈದ್ಯಕೀಯ ಜ್ಞಾನ ಸಂಸ್ಥೆಯಲ್ಲಿ 166 ಹುದ್ದೆಗಳು ಸೇರಿದಂತೆ ಒಟ್ಟು 367 ಹುದ್ದೆಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಮೊದಲು ಪ್ರಾಧಿಕಾರವು 12 ಸಂಸ್ಥೆಗಳ 1,064 ಹುದ್ದೆಗಳಿಗೆ ಪರೀಕ್ಷೆ ನಡೆಸಲು ಅರ್ಜಿ ಆಹ್ವಾನಿಸಿತ್ತು. ಇದೀಗ 367 ಹೆಚ್ಚುವರಿ ಹುದ್ದೆಗಳು ಸೇರ್ಪಡೆಗೊಂಡಿವೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಚ್ಛಿಸಿದಲ್ಲಿ ತಾವು ಆನ್‍ಲೈನ್ ಮೂಲಕ ಈಗಾಗಲೇ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿಯೇ ಬದಲಾವಣೆ ಮಾಡಲು ಅವಕಾಶವಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ನಲ್ಲಿ ನೋಡಬಹುದಾಗಿದೆ.