ಬೆಂಗಳೂರು: ವಾಣಿವಿಲಾಸ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಬಾಣಂತಿಯರ ಸಾವು ಪ್ರಕರಣದ ತನಿಖೆ ಇನ್ನೂ ವಿಳಂಬವಾಗಲಿದೆ. ತನಿಖಾ ತಂಡದಲ್ಲಿರುವ ಮೂವರು ವೈದ್ಯರು ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಹಾಗಾಗಿ ಆದೇಶ ಹೊರಬಿದ್ದರೂ ವಿವಿಧ ಕಾರಣಗಳಿಂದ ಆ ಮೂವರು ವೈದ್ಯರು ಸಭೆ ಸೇರಲು ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ತನಿಖೆ ಆರಂಭ ಕನಿಷ್ಟ ಮೂರ್ನಾಲ್ಕು ದಿನ ತಡವಾಗಲಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‍ಐಎಂಎಸ್) ವೈದ್ಯಕೀಯ ಅಧೀಕ್ಷಕ ಡಾ.ಲೇಪಾಕ್ಷಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ನಳಿನಿ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಅರವಳಿಕೆ ತಜ್ಞೆ ಡಾ. ಸಫಿಯಾ ಶೇಕ್ ಇದ್ದಾರೆ. ಸೋಮವಾರ ತನಿಖಾ ತಂಡ ಭೇಟಿ ನೀಡಲಿದೆ ಎಂಬ ಸ್ಥಳೀಯ ವೈದ್ಯರ ತಂಡದ ನಿರೀಕ್ಷೆ ಹುಸಿಯಾಗಿದೆ.