ಮೂಡುಬಿದಿರೆಯಲ್ಲಿ ಬಸ್‍ಗೆ ಕಲ್ಲು, ಮತ್ತೆ ಪ್ರಕ್ಷುಬ್ಧ
ಬಜರಂಗದಳ ಮುಖಂಡ ಪ್ರಶಾಂತ್ ಹತ್ಯೆ ಹಿನ್ನೆಲೆ ಯಲ್ಲಿ ಮೂಡಬಿದಿರೆಯಲ್ಲಿ ಎರಡು ದಿನಗಳಿಂದ ಬಿಗುವಿನ ವಾತಾವರಣ ಕಂಡುಬಂದಿತ್ತು...
ಮಂಗಳೂರು: ಬಜರಂಗದಳ ಮುಖಂಡ ಪ್ರಶಾಂತ್ ಹತ್ಯೆ ಹಿನ್ನೆಲೆ ಯಲ್ಲಿ ಮೂಡಬಿದಿರೆಯಲ್ಲಿ ಎರಡು ದಿನಗಳಿಂದ ಬಿಗುವಿನ ವಾತಾವರಣ ಕಂಡುಬಂದಿತ್ತು.
ಅದರೆ, ಭಾನುವಾರ ಮಧ್ಯಾಹ್ನದವರೆಗೆ ಶಾಂತವಾಗಿದ್ದ ಪಟ್ಟಣದಲ್ಲಿ ಮತ್ತೆ ಪ್ರಕ್ಷುಬ್ಧವಾತಾವರಣ ಆವರಿಸಿತು. ಗುಂಪೊಂದು ಬಸ್‍ಗೆ ಕಲ್ಲು ತೂರಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮರಳಿ ಆತಂಕ ಪರಿಸ್ಥಿತಿ ಮುಂದುವರಿದಿದೆ. ಪಟ್ಟಣದಲ್ಲಿ ಭಾನುವಾರ ಬೆಳಗ್ಗೆ ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಬೆಳಗ್ಗಿನಿಂದಲೇ ಬಸ್ಸುಗಳ ಓಡಾಟ ಎಂದಿನಂತೆ ಆರಂಭಗೊಂಡಿತ್ತು. ವರ್ತಕರು ವ್ಯಾಪಾರ ಆರಂಭಿಸಿದ್ದರು. ಆದರೆ ಮಧ್ಯಾಹ್ನ ವೇಳೆಗೆ ಎರಡು ಖಾಸಗಿ ಬಸ್‍ಗೆ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಆತಂಕದ ಪರಿಸ್ಥಿತಿ ತಲೆದೋರಿತು. ಕಾರ್ಕಳದಿಂದ ಮೂಡುಬಿದಿರೆಗೆ ಬರುತ್ತಿದ್ದ ಬಸ್ ಗಳಿಗೆ ಕಾಂತಾವರ ಕ್ರಾಸ್ ಬಳಿ ಕಲ್ಲು ತೂರಲಾಗಿದೆ. ಬಸ್‍ನ ಗಾಜು ಪುಡಿಯಾಗಿದೆ. ಆದರೆ ಈ ಬಗ್ಗೆ ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ. ಮೂಡುಬಿದಿರೆಯ ಜುಮ್ಮಾ ಮಸೀದಿಗೆ ಪೊಲೀಸ್ ಭದ್ರತೆ ಮುಂದುವರೆದಿದೆ. ಗಂಟಾಲ್‍ಕಟ್ಟೆ ಮಸೀದಿ, ಕೋಟೆಬಾಗಿಲು ಮಸೀದಿಗಳಿಗೂ ಭದ್ರತೆ ಒದಗಿಸಲಾಗಿದೆ.
ಹತ್ಯೆ ಆರೋಪಿಗಳನ್ನು ಎನ್‍ಕೌಂಟರ್ ಮಾಡ ಬೇಕು. ಮೃತನ ಕುಟುಂಬಕ್ಕೆ ಸರ್ಕಾರ ರು. 25 ಲಕ್ಷ ಪರಿಹಾರ ನೀಡಬೇಕು. ಹತ್ಯೆ ನಡೆದು 48 ಗಂಟೆಗಳೇ ಕಳೆದಿದ್ದರೂ ಆರೋಪಿಗಳ ಪತ್ತೆಯಾಗಿಲ್ಲ. ಘಟನೆಯ ಹಿಂದೆ ಕೆ.ಎಫ್ .ಡಿ ಕೈವಾಡ ಇದೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ತಾಲಿಬಾನ್, ಸಿರಿಯಾ ಮಾಡಲು ಬಿಡುವುದಿಲ್ಲ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.