ಬೆಂಗಳೂರು: ಅನ್ನದಾತನ ಬಲಿ ತೆಗೆದುಕೊಂಡ ಹಾಗೂ ಕಬ್ಬು ಬೆಳೆಗಾರರ ಬಾಕಿ ಪಾವತಿಸದ ಸರ್ಕಾರಕ್ಕೆ ರೈತ ಸಂಘಟನೆಗಳು ಧಿಕ್ಕಾರ ಕೂಗಿದವು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ರೈತರು ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸೋಮವಾರ ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದವು.
ಪೊರಕೆ, ಬಡಿಗೆ ಹಿಡಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ನಿದ್ರಾವಸ್ಥೆಯಲ್ಲಿದ್ದ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ. ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿಗಳು ಕಬ್ಬು ಬಾಕಿ ಪಾವತಿಗೆ ನೀಡಿದ್ದ ಭರವಸೆ ಈಡೇರಿಸಲಿಲ್ಲ. ಇಂದು ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಪರಿಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು. ಕಬ್ಬು ಬಾಕಿ ಪಾವತಿ, ಸಮರ್ಪಕ ವಿದ್ಯುತ್ ಪೂರೈಕೆ, ಕಳಸಾಬಂಡೂರಿ ಯೋಜನೆ ಬೇಡಿಕೆ ಸೇರಿದಂತೆ ರೈತರು ಹಲವು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ರೈತರಿಗೆ ಪ್ರತಿಭಟನೆ ಮಾಡುವುದೊಂದೇ ಕೆಲಸವಲ್ಲ. ಪ್ರತಿ ಬಾರಿ ಪ್ರತಿಭಟನೆ ಡೆಸಿದಾಗಲೂ ಕೇವಲ ಮನವಿ ಸ್ವೀಕರಿಸಿ ಸುಮ್ಮನಾಗುವುದು ಸರ್ಕಾರದ ಚಾಳಿಯಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ವಾಡಿಕೆಯಂತೆ ಮುಂಗಾರು ಮಳೆಯಾಗಿಲ್ಲ. ಕೆಲವೆಡೆ ಬಿತ್ತನೆ ಮಾಡಿದ್ದರೂ ಮೊಳಕೆಯೊಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಬಿತ್ತನೆ ಮಾಡದ ರೈತರಿಗೆ ಎಕರೆಗೆ ರು.10 ಸಾವಿರ ಹಾಗೂ ಬಿತ್ತನೆ ಮಾಡಿರುವ ರೈತರಿಗೆ ಎಕರೆಗೆ ರು.20 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೆ ಮೇವಿಲ್ಲ, ಜನರಿಗೆ ಕುಡಿಯುವ ನೀರಿಲ್ಲ.
ಇಂತಹ ಪರಿಸ್ಥಿತಿ ಇಂದೆಂದೂ ಕಂಡಿರಲಿಲ್ಲ. ಈ ಪರಿಸ್ಥಿತಿಯನ್ನು ರಾಜಕೀಯ ಪಕ್ಷಗಳು ದಾಳವನ್ನಾಗಿಸಿಕೊಳ್ಳುತ್ತಿವೆ. ಬಿಜೆಪಿ ಪಕ್ಷ ಕೈಗೊಂಡಿರುವ ರೈತ ಚೈತನ್ಯ ಯಾತ್ರೆಯನ್ನು ರಾಜ್ಯದಲ್ಲಿ ಮಾಡುವ ಬದಲು ದೆಹಲಿಗೆ ಹೋಗಿ ರಾಜ್ಯದ ಭೀಕರ ಪರಿಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ಆರ್ಥಿಕ ನೆರವು ತರುವ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕುರುಬೂರು ರಮೇಶ, ಮೈಸೂರಿನ ಶಂಕರ್, ರಾಜ್ಯ ಮಹಿಳಾ ಸಂಘದ ಸಂಚಾಲಕಿ ಜಿ.ವಿ. ಲಕ್ಷ್ಮೀದೇವಿ ಮಾತನಾಡಿದರು.