ಸಣ್ಣ ಸಮುದಾಯ ಮೇಲೆ ಬಿಜೆಪಿ ಕಣ್ಣು
ವಿಧಾನಪರಿಷತ್ ಸೋಲನ್ನು ಬದಿಗಿಟ್ಟು ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಬಿಜೆಪಿಯು ಅಧಿಕೃತ ತಯಾರಿ ಆರಂಭಿಸಿದೆ...
ಬೆಂಗಳೂರು: ವಿಧಾನಪರಿಷತ್ ಸೋಲನ್ನು ಬದಿಗಿಟ್ಟು ಮುಂಬರುವ ಜಿಪಂ, ತಾಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಬಿಜೆಪಿಯು ಅಧಿಕೃತ ತಯಾರಿ ಆರಂಭಿಸಿದೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಘಟಕಗಳ ಪ್ರಮುಖರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡ ರಾಜ್ಯ ನಾಯಕರು, ಸಲಹೆಗಳನ್ನು ನೀಡಿದರು. ಪ್ರತಿ ಜಿಲ್ಲೆಗೊಂಡು ಪ್ರಣಾಳಿಕೆ, ರಾಜ್ಯ ಮಟ್ಟದಲ್ಲೊಂದು ಪ್ರಣಾಳಿಕೆ ಸಿದ್ಧಪಡಿಸುವುದು, ಜಿಲ್ಲಾ ಮಟ್ಟದಲ್ಲಿ ಚುನಾವಣಾ ನಿರ್ವಹಣಾ ತಂಡ ರಚನೆ, ಜಿಲ್ಲಾ ಮಟ್ಟದ ಚುನಾವಣಾ ಸಮತಿ ರಚನೆ ಕುರಿತಂತೆ ಅಭಿಪ್ರಾಯಗಳು ವ್ಯಕ್ತವಾಯಿತು. ಬೆಳಿಗ್ಗೆ 8ರಿಂದ 10 ಗಂಟೆಗೆ ವಿಭಾಗ ಪ್ರಭಾರಿಗಳ ಸಭೆ ನಡೆಯಿತು. ನಂತರ ಕೋರ್ ಕಮಿಟಿ ಸಭೆ, ಮಧ್ಯಾಹ್ನ 12ರಿಂದ 4.30 ರವರೆಗೆ ಜಿಲ್ಲಾ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮೇಲ್ಪಟ್ಟ ಪ್ರಮುಖರ ಸಭೆ ನಡೆಯಿತು.
ಸ್ವತಂತ್ರ ಸ್ಪರ್ಧೆ: ಸಭೆಯ ಕುರಿತು ಮಾಹಿತಿ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಈ ಚುನಾವಣೆಯನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಸಮಿತಿಯು ತಾಲೂಕು ಚುನಾವಣಾ ಸಮಿತಿ ಶಿಫಾಸನ್ನು ಅನುಮೋದಿಸಲಿದೆ. ಅದೇ ರೀತಿ ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳನ್ನು ಶಿಫಾರಸು ಮಾಡುವ ಜಿಲ್ಲಾ ಚುನಾವಣಾ ಸಮಿತಿಯ ವರದಿಯನ್ನು ರಾಜ್ಯ ಚುನಾವಣಾ ಸಮಿತಿಯು ಅನುಮೋದನೆ ಮಾಡಿ ಅಂತಿಮಗೊಳಿಸಲಿದೆ ಎಂದ ಅವರು, ಚುನಾವಣೆಗೆ ಸಂಪನ್ಮೂಲವನ್ನು ಕ್ರೋಢೀಕರಿಸಲು ಜಿಲ್ಲಾ ಮಟ್ಟದಲ್ಲಿ ಪ್ರಯತ್ನ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.
ತಂಡಗಳ ಪ್ರವಾಸ: 31 ಜಿಲ್ಲೆಗಳಲ್ಲಿ ಚುನಾವಣೆ ದೃಷ್ಟಿಯಿಂದ 9 ತಂಡಗಳನ್ನು ರಚಿಸಲಾಗಿದ್ದು, ಈ ತಂಡವು ಜನವರಿ 10ರಿಂದ 14ರವರೆಗೆ ಮೊದಲ ಹಂತದಲ್ಲಿ ಚುನಾವಣಾ ಸಭೆಗಳನ್ನು ನಡೆಸಿ ಪಕ್ಷವನ್ನು ಸಜ್ಜುಗೊಳಿಸಲಿದೆ ಎಂದು ಸಿ.ಟಿ.ರವಿ ಹೇಳಿದರು. ಜನವರಿ 16ರಿಂದ 20ರವರೆಗೆ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸುವ ಜೊತೆಗೆ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಡಿ.ವಿ.ಸದಾನಂದ ಗೌಡ, ಎಸ್.ಸುರೇಶ್ ಕುಮಾರ್, ಪ್ರಹ್ಲಾದ್ ಜೋಶಿ, ಗೋವಿಂದ ಕಾರಜೋಳ, ಅನಂತಕುಮಾರ್, ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಿ.ಎಸ್.ಯಡಿಯೂರಪ್ಪ,ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಪ್ರತಿ ತಂಡದಲ್ಲಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿ ಪ್ರಮುಖ ಮುಖಂಡರು ಇದ್ದಾರೆ. ಹಾಗೆಯೇ ಚುನಾವಣೆ ಹಿನ್ನೆಲೆಯಲ್ಲಿ ಜನವರಿ 10ರಂದು ಪಕ್ಷದ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಾಗಿದೆ.
ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವಾಗ ಸಣ್ಣ ಸಣ್ಣ ಸಮಾಜವನ್ನು ಪರಿಗಣಿಸಲಾಗುತ್ತದೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿಯೇ ಟಿಕೆಟ್ ಹಂಚಿಕೆ ಮಾಡುವುದೂ ಒಂದು ಮಾನದಂಡ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಪ್ರಮುಖ್ ಎಸ್.ಪ್ರಕಾಶ್ ಇದ್ದರು.