ಬೆಂಗಳೂರು: ರಾಜ್ಯದಲ್ಲಿ ಕೈಗಾರಿಗಳಿಗೆ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. ನಗರದಲ್ಲಿ ಬುಧವಾರ ಇನ್ವೆಸ್ಟ್ ಕರ್ನಾಟಕ ಕುರಿತಂತೆ ಕೈಗಾರಿಕಾ ಕ್ಷೇತ್ರದ ನಾಯಕರು, ಗಣ್ಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸದ್ಯ ಕಾಣಿಸಿಕೊಂಡಿರುವ ವಿದ್ಯುತ್ ಸಮಸ್ಯೆ ತಾತ್ಕಾಲಿಕ ಮಾತ್ರ. ಇದು ಮುಂದುವರಿಯವುದಿಲ್ಲ. ಸಮಸ್ಯೆ ನಿವಾರಣೆಗೆ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಮೂಲಗಳಿಂದಲೂ ಹೆಚ್ಚಿನ ವಿದ್ಯುತ್ ಪಡೆಯಲು ಕಾರ್ಯ ಯೋಜನಗಳನ್ನು ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ, ವಿದ್ಯುತ್ ಸಮಸ್ಯೆ ಕುರಿತು ಇನ್ನಷ್ಟು ವಿವರ ನೀಡಿದ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ, ಜಲ ವಿದ್ಯುತ್, ನವೀಕರಿಸಬಹುದಾದ ಇಂಧನಗಳು ಸೇರಿದಂತೆ ಸುಮಾರು 3000 ಮೆ.ವ್ಯಾ.ವಿದ್ಯುತ್ ಈ ವರ್ಷದ ಜೂನ್ ವೇಳೆಗೆ ಗ್ರಿಡ್ ಸೇರಲಿದ್ದು, ಕೈಗಾರಿಕೆಗಳಿಗೆ ಯಾವುದೇ ರೀತಿಯಲ್ಲೂ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ ಎಂದರು. ನಂತರ ಮಾತನಾಡಿದ ಸಿದ್ದರಾಮಯ್ಯ, ಇನ್ವೆಸ್ಟ್ ಕರ್ನಾಟಕದಿಂದ ಉದ್ಯೋಗ ಅವಕಾಶಗಳು ಹೆಚ್ಚಾಗಲಿದೆ ಎಂದರು.
ಕಾರಿಡಾರ್ ಸಂಚಾರ ಆರಂಭ: ಇದಕ್ಕೂ ಮುನ್ನ ಸಚಿವ ದೇಶಪಾಂಡೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ನಿರ್ಮಿಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಮಾರ್ಚ್ ಸಮಯಕ್ಕೆ ಮೈಸೂರು ರಸ್ತೆಯಿಂದ ಮೆಜೆಸ್ಟಿಕ್, ವಿಧಾನಸೌಧ ಸಂಪರ್ಕಿಸುವ ಬೈಯಪ್ಪನಹಳ್ಳಿ ವರೆಗಿನ ಈಸ್ಟ್-ವೆಸ್ಟ್ ಕಾರಿಡಾರ್‍ನ ಸಂಚಾರ ಶುರವಾಗುತ್ತದೆ ಎಂದರು.