ಉಪ್ಪಿನಂಗಡಿ: ಫೇಸ್‍ಬುಕ್‍ನಲ್ಲಿ ಸ್ನೇಹ, ಪ್ರೀತಿಗೆ ತಿರುಗಿ ಕೊನೆಗೆ ಆ ಹುಡುಗಿಯನ್ನು ಭೇಟಿಯಾಗಿ, ಆಕೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ಈಗ ಮೋಸ ಹೋದ ಯುವಕನೊಬ್ಬ ಠಾಣೆ ಮೆಟ್ಟಿಲೇರಿದ್ದಾನೆ.
ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ 25ರ ಹರೆಯದ ಯುವಕ ಸಚಿನ್ ಎಂಬಾತ ಉಪ್ಪಿ ನಂಗಡಿ ಪೊಲೀಸರಿಗೆ ಭಾನುವಾರ ದೂರು ನೀಡಿದ್ದಾನೆ. ಫೇಸ್‍ಬುಕ್‍ನಲ್ಲಿ ಪರಿಚಯವಾದ ಸಕಲೇಶಪುರದ ಯುವತಿ ಪ್ರೇಮದ ಕರೆ ಕೊಟ್ಟಳು. ಸಂತಸದಿಂದ ಈತನೂ ಒಪ್ಪಿದ. ಅನೇಕ ದಿನ ದೂರವಾಣಿ ಮೂಲಕ ಮಾತನಾಡಿಕೊಂಡ ಬಳಿಕ ಪ್ರೀತಿ ಮದುವೆ ಬಗ್ಗೆ ಮಾತನಾಡುವಷ್ಟು ಮಟ್ಟಕ್ಕೆ ಬಂದಿತ್ತು. ಇಷ್ಟರಲ್ಲಿ ಯುವತಿ ತಾನು ಶಿಕ್ಷಣ ಮುಂದುವರೆಸಬೇಕು ಎಂದು ಹೇಳಿದ್ದು, ಅದಕ್ಕೂ ಒಪ್ಪಿದ್ದಾನೆ. ಹೀಗಾಗಿ ಸಕಲೇಶಪುರದಿಂದ ಆಕೆ ಮಂಗಳೂರಿಗೆ ಬಂದಿದ್ದಾಳೆ.
ಈತನಿಂದ ತನಗೆ ಬೇಕಾದ್ದನ್ನೆಲ್ಲ ಕೊಡಿಸಿಕೊಂಡಿದ್ದು, ಸುಮಾರು ರು.2 ಲಕ್ಷ ಖರ್ಚು ಮಾಡಿಸಿಕೊಂಡಿದ್ದಾಳೆ. ದಿನ ಕಳೆದಂತೆ ಯುವತಿಯಿಂದ ಫೋನ್ ಕರೆ ಕಡಿಮೆಯಾಗಿದೆ. ಈತ ಕರೆ ಮಾಡಿದರೂ ಮಾತನಾಡುವುದು ಅಷ್ಟಕ್ಕಷ್ಟೆಯಾಗಿದೆ. ಕೊನೆಗೊಂದು ದಿನ ತನಗೆ ಮದುವೆಯಾಗಿದೆ ಎಂದಿದ್ದಾಳೆ. ಮತ್ತೆ ಕರೆ ಮಾಡಿದಾಗ ಪತಿಯ ಸಂಬಂಧಿಕರು ಎಂದು ಹೇಳಿಕೊಂಡು ಹಲವರಿಂದ ಬೆದರಿಕೆ ಕರೆ ಮಾಡಿಸಿದ್ದಾಳೆ ಎಂಬ ಮಾಹಿತಿ ದೂರಿನಲ್ಲಿದೆ.