ಬೆಂಗಳೂರು: ಹಾಲಿನ ದರ ಏರಿಕೆ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಕೆಎಂಎಫ್ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಹೆಚ್ಚಳ ಮಾಡಿರುವ ರು.4ರಲ್ಲಿ ನಯಾಪೈಸೆ ರೈತರಿಗೆ ಸಿಗುತ್ತಿಲ್ಲ ಎಂದು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಹಾಲು ಮಹಾಮಂಡಲದ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ದರ ಹೆಚ್ಚಳ ರೈತರಿಗೆ ಮೋಸ ಮಾಡುವ ಹೊಸ ಕ್ರಮವಾಗಿದೆ. ದೇಶದಲ್ಲಿ ಅತ್ಯಂತ ಕಡಿಮೆ ಹಾಲಿನ ದರ ಮತ್ತು ಗುಣಮಟ್ಟದ ಹಾಲು ಉತ್ಪಾದನೆ ಆಗುತ್ತಿರುವುದು ರಾಜ್ಯದಲ್ಲಿ ಮಾತ್ರ. ಪಂಜಾಬ್‍ನಲ್ಲಿ ರೈತರಿಗೆ ರು.50, ಪಕ್ಕದ ರಾಜ್ಯಗಳಲ್ಲಿ ರು.38-40 ಸಿಗುತ್ತದೆ. ಅದೇ ನಮ್ಮ ರಾಜ್ಯದಲ್ಲಿ ರು.19ರಿಂದ 22 ಮಾತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೈತರು ಲೆವಿಯನ್ನು ಯಾಕೆ ನೀಡಬೇಕು ಎಂದು ಪ್ರಶ್ನಿಸಿದ ಅವರು, ರೈತರಿಗೆ ಹಾಲಿಗೆ ಕಡಿಮೆ ಪ್ರಮಾಣದ ಹಣ ನೀಡಲಾಗುತ್ತಿದೆ ಎಂದು ಕಾರಣ ಹೇಳಿ ಬೆಲೆ ಹೆಚ್ಚಳ ಮಾಡಿದೆ. ಆದರೆ ತಮ್ಮ ಆಡಳಿತದ ವೆಚ್ಚವನ್ನು ಭರಿಸಲು ಹೀಗೆ ಮಾಡಲಾಗಿದೆ ಎಂದು ದೂರಿದರು. ಪ್ರತಿಭಟನೆ ವೇಳೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ಪ್ರತಿ ದಿನ 64 ಲಕ್ಷ ಲೀ. ಹಾಲು ಉತ್ಪಾದನೆ ಯಾಗುತ್ತಿದ್ದು, ರು.1.37 ಕೋಟಿ ವಹಿವಾಟು ನಡೆಯುತ್ತಿದೆ. ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವುದರಿಂದ ಪಶು ಆಹಾರದ ಬೆಲೆ ಹೆಚ್ಚಳ ಮಾಡಲಾಗಿದೆ. ಬೆಲೆ ಕಡಿತ ಕುರಿತು ಮತ್ತೊಮ್ಮೆ ರೈತ ಮುಖಂಡರ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಹಾಲಿನ ದರ ಹೆಚ್ಚಳಕ್ಕೆ ಜೆಡಿಎಸ್ ವಿರೋಧ
ಹಾಲಿನ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ನಗರ ಘಟಕದ ಸದಸ್ಯರು ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ದರ ಏರಿಕೆ ಮಾಡಿದ ಕೆಎಂಎಫ್ ಮತ್ತು ಅದನ್ನು ಸಮರ್ಥಿಸುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕರಪತ್ರಗಳನ್ನಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಪ್ರಧಾನ ಕಾರ್ಯದರ್ಶಿ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ನಂದಿನಿ ಹಾಲಿನ ದರವನ್ನು ಲೀಟರ್‍ಗೆ ರು.4 ಮತ್ತು ಮೊಸರಿನ ದರವನ್ನು ಲೀಟರ್‍ಗೆ ರು.2 ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ದೂರಿದರು.ರಾಜ್ಯ ಸರ್ಕಾರವು ಜನಸಾಮಾನ್ಯರ ಹಿತಕ್ಕೆ ವಿರುದ್ಧವಾಗಿ ಹಾಲಿನ ದರ ಏರಿಕೆ ಮಾಡಿದೆ. ಇದರಿಂದ ಹಾಲು ಒಕ್ಕೂಟಗಳಿಗೆ ಮಾತ್ರ ಲಾಭವಾಗುತ್ತಿದೆ ಎಂದು ಆರೋಪಿಸಿದರು.
ಹಾಲಿನ ದರ ಹೆಚ್ಚಳದ ನಂತರ ರೈತರಿಗೆ ಹೆಚ್ಚುವರಿಯಾಗಿ ಹಣ ನೀಡುತ್ತಿಲ್ಲ. ಬದಲಿಗೆ ಪಶು ಆಹಾರದ ದರವನ್ನು ಹೆಚ್ಚಳ ಮಾಡಲಾಗಿದೆ. ಇದು ಸರ್ಕಾರದ ಜನ ಮತ್ತು ರೈತ ವಿರೋಧಿ ನೀತಿಗೆ ಸಾಕ್ಷಿ ಎಂದು ಹೇಳಿದರು. ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಹಾಲು ಒಕ್ಕೂಟಗಳಲ್ಲಿ ಆಡಳಿತಾತ್ಮಕ ವೆಚ್ಚ ತಗ್ಗಿಸಿ ಮತ್ತು ಸೋರಿಕೆಯನ್ನು ತಡೆಗಟ್ಟಿ ಹಾಲು ಉತ್ಪಾದಕರಿಗೆ ಹೆಚ್ಚಿನ ನೆರವು ನೀಡಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಬಿಬಿಎಂಪಿ ಸದಸ್ಯೆ ಮಂಜುಳಾ
ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್, ಜೆಡಿಎಸ್ ಮುಖಂಡರಾದ ರಮೇಶ್‍ಗೌಡ ಪಾಲ್ಗೊಂಡಿದ್ದರು.