ಬೆಂಗಳೂರು: ರೌಡಿಸಂನಲ್ಲಿ ಒಮ್ಮೆ ಹೆಸರು ಮಾಡಿದರೆ ಹಿಂದಿರುಗಿ ನೋಡುವ ಪ್ರಮೇಯವೇ ಇರುವುದಿಲ್ಲ. ಫೀಲ್ಡಿನಲ್ಲಿ ಹೆಸರು ಮಾಡಿದರೆ ಕುಳಿತ ಜಾಗಕ್ಕೆ ಹಣವೇ ಬರುತ್ತದೆ ಎಂದು ಸಿನೆಮಾ ಮಾದರಿಯಲ್ಲಿ ಯೋಚಿಸಿದ್ದರು.
ಕೊನೆಗೆ ಫೀಲ್ಡ್ ಗೆ ಇಳಿದೂ ಬಿಟ್ಟರು. ಇತ್ತೀಚೆಗೆ ಒಬ್ಬ ಅಮಾಯಕನ ಪ್ರಾಣವನ್ನೂ ತೆಗೆದಿದ್ದರು. ಎಷ್ಟು ಬೇಗ ರೌಡಿಸಂ ನಲ್ಲಿ ಹೆಸರು ಮಾಡಲು ಮುಂದಾದರೋ ಕೊಲೆ ಮಾಡಿ ಅಷ್ಟೇ ಬೇಗ ಪೊಲೀಸರ ಬಲೆಗೆ ಬಿದ್ದರು.
ಕೊಲೆ ಪ್ರಕರಣವೊಂದರ ಸಂಬಂಧ ಮೂವರು ಬಾಲಾರೋಪಿಗಳನ್ನು ಬಂಧಿಸಿರುವ ಚಂದ್ರಾ ಲೇ ಔಟ್ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.
ಶುಕ್ರವಾರ (ಜ.8) ತಡರಾತ್ರಿ ಅಕ್ಕನ ಮೊಮ್ಮಗಳ ಹುಟ್ಟುಹಬ್ಬ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ನಾಯಂಡಳ್ಳಿಯ ವಿನಾಯಕ ಲೇಔಟ್ ನಿವಾಸಿ ಶಿವಮಾದು (40) ಎಂಬುವರನ್ನು ಅಡ್ಡಗಟ್ಟಿದ ಆರೋಪಿಗಳು, ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಮಾದು ಸ್ಥಳದಲ್ಲೇ ಮೃತಪಟ್ಟಿದ್ದರು.ಈ ಸಂಬಂಧ ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ರೌಡಿಸಂನಲ್ಲಿ ಹೆಸರು ಮಾಡುವ ಆಸೆ: ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಹಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಹೀಗೆ ಮುಂದುವರಿದ ವಿಚಾರಣೆಯಲ್ಲಿ ಶಿವಮಾದು ಸ್ನೇಹಿತರೊಬ್ಬರು ಪೊಲೀಸರು ತೋರಿಸಿದ ಫೋಟೋ ನೋಡಿ ಆರೋಪಿಗಳನ್ನು ಗುರುತಿಸಿದರು.
ಇದರ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಬಾಲಾರೋಪಿಗಳು ನಾಯಂಡಳ್ಳಿ ನಿವಾಸಿಗಳು.
ವಿಚಾರಣೆ ವೇಳೆ ಶಿವಮಾದು ಕೊಲೆ ಮಾಡಿದ್ದು ತಾವೇ ಎಂದು ಒಪ್ಪಿಸಿಕೊಂಡಿರುವ ಆರೋಪಿಗಳು ರೌಡಿಸಂನಲ್ಲಿ ಹೆಸರು ಮತ್ತು ಹಣ ಮಾಡಲು ಈ ಕೃತ್ಯಕ್ಕೆ ಕೈ ಹಾಕಿದ್ದಾಗಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಕೃತ್ಯಕ್ಕೆ ಕೈಜೋಡಿಸಿ ತಲೆಮರೆಸಿಕೊಂ ಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಬಾಲಾರೋಪಿಗಳು ಕಳ್ಳತನ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು ಎನ್ನಲಾಗಿದೆ. ಕೊಲೆಯಾದ ಶಿವಮಾದು (40) ಮೂಲತಃ ಚನ್ನಪಟ್ಟಣದ ದಶವಾರದವರು. ಕಳೆದ ಹಲವು ವರ್ಷಗಳಿಂದ ಪತ್ನಿ ಪವಿತ್ರಾ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ನೆಲೆಸಿದ್ದರು. ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಸೈಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಚ್ಚು ಮನಸ್ಸಿನ ಆರೋಪಿಗಳ ಕತ್ತಿಗೆ ಅನ್ಯಾಯವಾಗಿ ಬಲಿಯಾಗಿದ್ದರು.