ಬೆಂಗಳೂರು: ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ನಗರದಲ್ಲಿ ಮೂರು ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರದಿಂದ ಒಪ್ಪಿಗೆ ದೊರೆತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಫೆರಿಫರಲ್ ರಸ್ತೆ ನಿರ್ಮಾಣ, ಎಲಿವೇಟೆಡ್ ಕಾರಿಡಾರ್,
ಸ್ಯಾಟ್‍ಲೈಟ್ ಟೌನ್ ರೋಡ್ ನಿರ್ಮಾಣಕ್ಕೆ ಸಹಕಾರ ನೀಡುವ ಸ್ಪಂದನೆ ದೊರೆತಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮೂರು ರಸ್ತೆಗಳ ಪ್ರಸ್ತಾವನೆ ಇಡಲಾಗಿತ್ತು. ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸಬಹು ದೆಂಬ ಅಂಶವನ್ನು ಸಚಿವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಕಾರಾತ್ಮಕ ಸ್ಪಂದನೆ ದೊರೆಯಿತು ಎಂದರು.
ಉತ್ತರ- ದಕ್ಷಿಣ ಕಾರಿಡಾರ್ ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಹೆಬ್ಬಾಳದವರೆಗೆ (6 ಪಥದ 18.1 ಕಿ. ಮೀ ಉದ್ದ), ಪೂರ್ವ- ಪಶ್ಚಿಮ ಕಾರಿಡಾರ್-1 ಕೆ.ಆರ್. ಪುರಂನಿಂದ ಗೊರಗುಂಟೆಪಾಳ್ಯವರೆಗೆ (6 ಪಥದ19.70 ಕಿ.ಮೀ. ಉದ್ದ), ಪೂರ್ವ- ಪಶ್ಚಿಮ- 2 ಕಾರಿಡಾರ್ ಜ್ಞಾನಭಾರತಿಯಿಂ ದ ವರ್ತೂರು ಕೋಡಿವರೆಗೆ (6 ಪಥದ 27.70 ಕಿ.ಮೀ. ಉದ್ದ),
ಉತ್ತರ- ದಕ್ಷಿಣ ಮತ್ತು ಪೂರ್ವ- ಪಶ್ಚಿಮ-2 ಕಾರಿಡಾರ್ ಅಗ್ರದಿಂದ ಕಲಾಸಿಪಾಳ್ಯವರೆಗೆ (4 ಪಥದ 9.20 ಕಿ.ಮೀ. ಉದ್ದ), ಪೂರ್ವ- ಪಶ್ಚಿಮ- 1 ಮತ್ತು 2 ಕಾರಿಡಾರ್ ರಿಚ್‍ಮಂಡ್
ರಸ್ತೆಯಿಂದ ಹಲಸೂರುವರೆಗೆ (4 ಪಥದ 2.30 ಕಿ.ಮೀ. ಉದ್ದ) ಹಾಗೂ ಕಲ್ಯಾಣ ನಗರ ಜಂಕ್ಷನ್‍ನಿಂದ ವರ್ತುಲ ರಸ್ತೆಯಿಂದ ಜಾನ್ಸ್ ಚರ್ಚ್ ರಸ್ತೆ ಮತ್ತು ವೀಲರ್ಸ್ ರಸ್ತೆ ಜಂಕ್ಷನ್ ವರೆಗೆ (4 ಪಥದ 5.70 ಕಿ.ಮೀ.) ಸೇರಿದಂತೆ ಒಟ್ಟು 82.7 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ರು.11 ಸಾವಿರ ಕೋಟಿ ವೆಚ್ಚದಲ್ಲಿ ಫೆರಿಫರಲ್ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 18 ಸಾವಿರ ಕೋಟಿ ವೆಚ್ಚದಲ್ಲಿ ಮೂರು ಎಲೆವೇಟೆಡ್ ಕಾರಿಡಾರ್ ನಿರ್ಮಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.
ಅಂತರ್ಜಲ ಮರು ಪೂರಣಕ್ಕೆ ಒತ್ತು: ನಗರದಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ಇದರ ಮರು ಪೂರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಮಹಾನಗರ ಕೆರೆಗಳ ಸಂರಕ್ಷಣೆ ಬಗ್ಗೆ ಯಲ್ಲಪ್ಪರೆಡ್ಡಿ ಸೇರಿದಂತೆ ತಜ್ಞರು ಸರ್ಕಾರಕ್ಕೆ ನೀಡಿರುವ ಸಲಹೆಯಂತೆ ಮಳೆ ಕೊಯ್ಲಿಗೆ ಗಮನ ನೀಡಲಾಗುತ್ತದೆ. ಮೊದಲಿಗೆ ಸರ್ಕಾರಿ ಸಂಸ್ಥೆಗಳಲ್ಲೇ ಅನುಷ್ಠಾನಗೊಳಿಸಿ ನಂತರ ಸಾರ್ವಜನಿಕರನ್ನು ಒಳಗೊಳ್ಳುವಂತೆ ಮಾಡಲಾಗುವುದು. ಇನ್ನು 15 ದಿನಗಳೊಳಗೆ ರಾಜಕಾಲುವೆ, ಚರಂಡಿ ಸೇರಿ ಒತ್ತುವರಿ ತೆರವಿಗೆ ಕ್ಷಿಪ್ರ ಕಾರ್ಯ ಆರಂಭಿಸಲಾಗುವುದು ಎಂದು ವಿವರಿಸಿದರು.
ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ, ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯ್ಕ್, ಬಿಡಿಎ ಆಯುಕ್ತ ಓ. ಶ್ಯಾಂ ಭಟ್, ಜಲಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಸೇರಿದಂತೆ
ಮತ್ತಿತರರು ಉಪಸ್ಥಿತರಿದ್ದರು. ಬೆಳ್ಳಂದೂರಿಗೆ ಶಾಶ್ವತ ಪರಿಹಾರ: ನಗರದ ಪ್ರಮುಖ ಕೆರೆಯಾದ ಬೆಳ್ಳಂದೂರು ಕೆರೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಕಾರ್ಯಪ್ರವೃತ್ತಿಯಾಗಿದ್ದು, ಸದ್ಯ ಉತ್ಪತ್ತಿಯಾಗುತ್ತಿರುವ ನೊರೆ ನಿವಾರಣೆಗೆ ರಾಸಾಯನಿಕ ಸಿಂಪರಣೆ ಮತ್ತು ನೀರು ಸರಾಗವಾಗಿ ಹರಿಯಲು ಕೋಡಿಯನ್ನು ಸ್ಲೋಪ್ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಜರ್ಮನ್ ಕಂಪನಿಗೆ ಯೋಜನೆ ರೂಪಿಸಲು ಜವಾಬ್ದಾರಿ ನೀಡಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಕೊಳಚೆ ನೀರು ಶುದ್ಧೀಕರಣ
ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ಶುದ್ಧೀಕರಣಕ್ಕೆ ಸಂಸ್ಕರಣಾ ಘಟಕ ತೆರೆಯಲಾಗಿದೆ. ಒಟ್ಟು 1240 ಎಂಎಲ್‍ಡಿ ಕೊಳಚೆ ನೀರಿನ ಸಂಸ್ಕರಣೆ ಗುರಿ ಇದ್ದರೂ ಈಗ 725 ಎಂಎಲ್‍ಡಿಯಷ್ಟು ನೀರನ್ನು ಸಂಸ್ಕರಿಸಲಾಗುತ್ತಿದೆ. 329 ಎಂಎಲ್‍ಡಿ ಸಂಸ್ಕರಣಕ್ಕೆ ಕಾಮಗಾರಿ ಆರಂಭಿಸಿದ್ದು, 510 ಎಂಎಲ್‍ಡಿ ಕೊಳಚೆ ನೀರಿನ ಶುದ್ಧೀಕರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಸ್ರೇಲ್ ಕಂಪನಿಯಿಂದ ತಂತ್ರಜ್ಞಾನ ಬಳಸಿ ನವೀಕರಿಸಲಾಗುವುದು. ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಸ್ಕರಿಸಿ ಟ್ರೀಪಾರ್ಕ್ ಮತ್ತು ಆಟದ ಮೈದಾನ ನಿರ್ಮಿಸುವ ಬಗೆಗೂ ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.