ಬೆಂಗಳೂರು: ಹಾಲು ದರ ಏರಿಕೆ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ವಿಚಾರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ. ಎಂ.ಧನಂಜಯ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ-ಯನ್ನು ರಾಜ್ಯದ ರೈತಾಪಿ ವರ್ಗ ಸಂತೋಷದಿಂದ ಸ್ವಾಗತಿಸಿದೆ. ಒಂದು ವೇಳೆ ರೈತರು ಹಾಲಿನ ದರ ಏರಿಕೆಯನ್ನು ವಿರೋಧಿಸಿದ್ದ ಪಕ್ಷದಲ್ಲಿ ಇತ್ತೀಚೆಗೆ ಸಚಿವರು ನಡೆಸಿದ ಫೋನ್-ಇನ್ ಕಾರ್ಯಕ್ರಮದಲ್ಲಿ ರೈತರು ದರ ಏರಿಕೆಯನ್ನು ವಿರೋಧಿಸುತ್ತಿದ್ದರು. ಆದರೆ, ಯಾವುದೇ ರೈತರು ದರ ಏರಿಕೆಯನ್ನು ವಿರೋಧಿಸಲಿಲ್ಲ. ಬದಲಾಗಿ ಕರೆ ಮಾಡಿದ ಎಲ್ಲ ರೈತರು ಹಾಲಿನ ದರ ಏರಿಕೆಯನ್ನು ಸಂತೋಷದಿಂದ ಸ್ವಾಗತಿಸಿ ಸಚಿವರಿಗೆ ಅಭಿನಂದನೆ ತಿಳಿಸಿದ್ದಾರೆ ಎಂದರು.
ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆಯಿದೆ. ಆಂಧ್ರದಲ್ಲಿ ಲೀಟರ್ ಹಾಲಿಗೆ <50, ಗೋವಾ ಹಾಗೂ ಗುಜರಾತಿನಲ್ಲಿ ರು.48, ಜಮ್ಮು ಮತ್ತು ಕಾಶ್ಮೀರದಲ್ಲಿ ರು.44, ಹರಿಯಾಣದಲ್ಲಿ ರು.42, ಭೂಪಾಲ್‍ನಲ್ಲಿ ರು.44 ಮತ್ತು ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಪ್ರತಿ ಲೀಟರ್ ಬೆಲೆ ರು.41 ನಿಗದಿಪಡಿಸಲಾಗಿದೆ. ಈ ಪೈಕಿ ಕರ್ನಾಟಕದಲ್ಲಿ ಕಡಿಮೆ ಬೆಲೆಯಿದೆ ಎಂದು ಮಾಹಿತಿ ನೀಡಿದರು.