ಬೆಂಗಳೂರು: ರೌಡಿಗಳ ಗ್ಯಾಂಗ್ ವಾರ್ ಮತ್ತೆ ಸದ್ದು ಮಾಡಿದೆ. ಹೆಬ್ಬಾಳದ ರೌಡಿಶೀಟರ್ ಸತೀಶ್ ಅಲಿಯಾಸ್ ಗುಂಡನನ್ನು ಎದುರಾಳಿ ಗುಂಪಿನ ರೌಡಿಗಳು ಬೆಳ್ಳಂಬೆಳಗ್ಗೆ
ಸಾರ್ವಜನಿಕರ ಎದುರೇ ಕೊಚ್ಚಿ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ.
ಗುಡ್ಡದಹಳ್ಳಿ ನಿವಾಸಿ ರೌಡಿಶೀಟರ್ ಸತೀಶ್ ಹತ್ಯೆಯಾದವ. ಬೆಳಗ್ಗೆ 8.50ರ ಸುಮಾರಿಗೆ ಗುಡ್ಡದಹಳ್ಳಿ ವೃತ್ತದಲ್ಲಿರುವ ಟೀ ಅಂಗಡಿ ಮುಂದೆ ಸತೀಶ್ ತನ್ನ ಸ್ನೇಹಿತರೊಂದಿಗೆ ಟೀ
ಸೇವಿಸುತ್ತಾ ಕುಳಿತಿದ್ದ. ಈ ವೇಳೆ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಒಂದು ಕ್ಷಣವೂ ಯೋಚಿಸದೆ ಸತೀಶ್‍ನ ಮೇಲೆ ಎರಗಿ ಮನಬಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ವಾಹನ ಚಾಲಕನಾಗಿದ್ದ ಸತೀಶ್ ಈ ಹಿಂದೆ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಹೆಬ್ಬಾಳ ಠಾಣೆಯಲ್ಲಿ ಈತನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿತ್ತು. ಮೂರು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈತ ಬಳಿಕ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದ. ಈ ಹಿಂದೆ ಸತೀಶ್ ಮತ್ತು ಸಹಚರ ಮಹೇಶ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದರು. ಘಟನೆ ಬಳಿಕ ಮಹೇಶ್, ಸತೀಶನ ಗುಂಪಿನಿಂದ ಹೊರಬಂದು ಪ್ರತ್ಯೇಕ ಗುಂಪು ಕಟ್ಟಿಕೊಂಡು ಅಪರಾಧ ಚಟುವಟಿಕೆ ಮುಂದುವರಿಸಿದ್ದ ಎನ್ನಲಾಗಿದೆ.
ಸತೀಶನ ಗುಂಪಿನಿಂದ ಪ್ರತ್ಯೇಕಗೊಂಡು ತನ್ನದೇ ಗುಂಪು ಕಟ್ಟಿಕೊಂಡಿದ್ದ ಮಹೇಶ್, ಸತೀಶನ ಮೇಲೆ ದ್ವೇಷ ಕಾರುತ್ತಿದ್ದ. ಸಮಯ ನೋಡಿ ಕೊಲೆ ಮಾಡಲು ಹವಣಿಸುತ್ತಿದ್ದ. ಇದಕ್ಕಾಗಿ ಹಲವು ದಿನಗಳಿಂದ ತನ್ನ ಹುಡುಗರೊಂದಿಗೆ ಹೊಂಚು ಹಾಕುತ್ತಿದ್ದ. ಅಂತೂ ಸತೀಶ್ ಟೀ ಅಂಗಡಿ ಬಳಿ ಕುಳಿತಿರುವ ಬಗ್ಗೆ ತಿಳಿದ ಮಹೇಶ್, ಬೆಳಗ್ಗೆ ಸಹಚರರೊಂದಿಗೆ ಬಂದು ಸತೀಶನ ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಹೆಬ್ಬಾಳ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.