ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉದ್ಯಾನ ನಗರಿಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ನಡೆದವು. ನಗರದ ಫ್ಯಾಶನ್ ಬಟ್ಟೆಗಳಲ್ಲೇ ವರ್ಷವಿಡೀ ಕಳೆಯುವ ಯುವತಿಯರು ಲಂಗ, ದಾವಣಿ ತೊಟ್ಟು ಎಳ್ಳು ಬೀರುತ್ತಿದ್ದುದ್ದು ವಿಶೇಷವಾಗಿತ್ತು.
ಗವಿಪುರಂನ ಗವಿಗಂಗಾಧರೇಶ್ವರ, ಬನಶಂಕರಿ 3ನೇ ಹಂತದಲ್ಲಿರುವ ಬನಶಂಕರಿ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲೇಶ್ವರ, ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ, ವೈಯಾಲಿಕಾವಲ್‍ನ ತಿರುಪತಿ ತಿರುಮಲ ದೇವಸ್ಥಾನ, ಭುವನೇಶ್ವರಿ ನಗರದ ಮಹಾಲಕ್ಷೀ ದೇವಾಲಯಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೂ ಹಲವು ಪೂಜಾ ಕಾರ್ಯಕ್ರಮಗಳು ಜರುಗಿದವು. ದಕ್ಷಿಣ ಕಾಶಿ ಎಂದು ಪ್ರಸಿದಿಟಛಿ ಪಡೆದಿರುವ ಶ್ರೀ ಗವಿಗಂಗಾಧರೇಶ್ವರ ದೇವಾಲಯದ ಶಿವಲಿಂಗವನ್ನು ಸೂರ್ಯರಶ್ಮಿಯು ಮಧ್ಯಾಹ್ನ 3.45ರಿಂದ 4.15ರವರೆಗೆ ಸ್ಪರ್ಶಿಸಿತು.
ಸೂರ್ಯನು ಕರ್ಕಾಟಕ ರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ. ಹೀಗಾಗಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ಸೂರ್ಯರಶ್ಮಿಯ ದಿವ್ಯ ದರ್ಶನವಾಗುತ್ತದೆ. ಉತ್ತರಾಯಣ ಪುಣ್ಯಕಾಲದಲ್ಲಿ ಸೂರ್ಯರಶ್ಮಿ ಶಿವಲಿಂಗ ಸ್ಪರ್ಶಿಸುವುದೇ ಒಂದು ಪವಾಡ. ಈ ಕ್ಷಣವನ್ನು ಸಾವಿರಾರು ಭಕ್ತಾದಿಗಳು ವೀಕ್ಷಿಸಿದರು.
ಕೆಂಗೇರಿ ಹೋಬಳಿ ನೈಸ್ ಕಾರಿಡಾರ್ ವೃತ್ತದ ಸೋಂಪುರದ ಬಸವೇಶ್ವರ ದೇವಾಲಯ ಆವರಣದಲ್ಲಿ ಕಡೆಲೆಕಾಯಿ ಪರಿಷೆ ಏರ್ಪಡಿಸಲಾಗಿತ್ತು. ಮಹಾಲಕ್ಷ್ಮಿ ದೇವಾಲಯದಲ್ಲಿ ಖ್ಯಾತ ಕಲಾವಿದರಿಂದ ಜಾನಪದ ಗೀತೆ ಗಾಯನ, ಗಡಿಗೆ ಒಡೆಯುವ ಸ್ಪರ್ಥೆ ಆಯೋಜಿಸಲಾಗಿತ್ತು. ಜಯನಗರದ 1ನೇ ಬ್ಲಾಕ್ ಬಳಿ ಹಸುಗಳ ಕಿಚ್ಚು ಹಾಯಿಸುವಕೆ ನಡೆಯಿತು. ಕೆ.ಎಸ್.ಗಾರ್ಡನ್ ನಲ್ಲಿ ಮೂನ್ ರಾಕರ್ಸ್ ಸಂಘದಿಂದ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿದ್ದು, ಈ ಪ್ರಯುಕ್ತ ಪುಟ್ಟ ಮಕ್ಕಳೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಪೊಂಗಲ್ ಮಾಡುವ ಸ್ಪರ್ಥೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ಹಬ್ಬ ಆಚರಿಸಿದರು.