ಬೆಂಗಳೂರು: ದಿನೇ ದಿನೇ ಹೆಚ್ಚಾಗುತ್ತಿರುವ ವಾಹನಗಳು ಹಾಗೂ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾರಿಗೆ ಇಲಾಖೆ ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸರು ಜಂಟಿಯಾಗಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ 27ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಶನಿವಾರ ತೆರೆಬಿದ್ದಿದೆ.
ಯವನಿಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇರುವೆಗಳು ಹಾಗೂ ಪೆಂಗ್ವಿನ್‍ಗಳು ಶಿಸ್ತಿನಿಂದ ಸಾಲಾಗಿ ನಡೆಯುತ್ತವೆ. ಅದೇ ರೀತಿ ಕೆಲವು ಜಾತಿಯ ಪಕ್ಷಿಗಳು ಸಾಲಾಗಿ ಹಾರುತ್ತವೆ. ಆದರೆ, ವಾಹನ ಸವಾರರು ಮಾತ್ರ ಶಿಸ್ತು ಮರೆತು ನಿಯಮ ಉಲ್ಲಂಘಿಸುತ್ತಿದ್ದಾರೆ. ಇತರೆ ದೇಶಗಳಲ್ಲಿ ಸಂಚಾರ ನಿಯಮ ಕಡ್ಡಾಯವಾಗಿ ಪಾಲನೆಯಾಗಿದೆ. ಆದರೆ, ನಮ್ಮಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ ಎಂದರು.
ಭಾರತದಲ್ಲಿ ಪ್ರತಿ ವರ್ಷ ಸುಮಾರು 4.75 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿ ದ್ದು, ಸುಮಾರು 1.47 ಲಕ್ಷ ಜನ ಮೃತಪಡುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನರು ಅಪಘಾತದಿಂದ ಮೃತರಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್, ಅಪಘಾತಗಳನ್ನು
ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡುತ್ತಿದೆ. ಜೊತೆಗೆ, ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ರಾಜ್ಯ ಸರ್ಕಾರಗಳು ಯಾವ ರೀತಿ
ಕಾರ್ಯಪ್ರವೃತ್ತವಾಗಿವೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸುತ್ತಿದೆ. ಹೀಗಾಗಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ಶೇ.90 ರಷ್ಟು ಕೆಲಸ ಮಾಡುತ್ತಿದ್ದಾರೆ. ಶೇ.95ರಷ್ಟು ಅಪಘಾತಗಳು ಅತೀ ವೇಗದಿಂದ ವಾಹನ ಚಲಾಯಿಸುವುದರಿಂದಲೇ ಸಂಭವಿಸುತ್ತಿವೆ. ಹಾಗಾಗಿ ಮೊದಲು ಸವಾರರಲ್ಲಿ ಜವಾಬ್ದಾರಿ ಬರಬೇಕೇ ಹೊರತು, ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಪ್ರಯೋಜನವಾಗದು. ಹೆಲ್ಮೆಟ್ ಧರಿಸದಿರುವುದರಿಂದ ಶೇ.30ರಷ್ಟು ಬೈಕ್ ಹಿಂಬದಿ ಸವಾರರು ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ- ಗೊಳಿಸಿದೆ ಎಂದು ಹೇಳಿದರು.
ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್.ರೋಷನ್ ಬೇಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಎಸ್.ಮೇಘರಿಕ್, ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ರಾಮೇಗೌಡ, ನಟಿ ತೇಜಸ್ವಿನಿ, ರಮಾರೆಡ್ಡಿ ಮತ್ತಿತರರು ಇದ್ದರು.
ಹೆಲ್ಮೆಟ್ ಕಡ್ಡಾಯ ಒಳ್ಳೆಯ ಬೆಳವಣಿಗೆ
ದ್ವಿಚಕ್ರ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ಹೆಲ್ಮೆಟ್ ಮೇಲೆ `ನಿಮ್ಮ ಕುಟುಂಬದವರು ನಿಮಗಾಗಿ ಕಾಯುತ್ತಿದ್ದಾರೆ ಎಂದು ಬರೆಸುವುದು ಉತ್ತಮ' ಎಂದು ಚಿತ್ರನಟ ವಿ.ರವಿಚಂದ್ರನ್ ಹೇಳಿದರು. ಬೆಂಗಳೂರಿನಲ್ಲಿ ರಸ್ತೆಗಳೇ ಸರಿಯಾಗಿಲ್ಲ. ಹೀಗಾಗಿ ಮೊದಲು ರಸ್ತೆಗಳನ್ನು ಸರಿಪಡಿಸಬೇಕು. ನಿತ್ಯ ಜೀವನ ಅವಸರದಿಂದಲೇ ಪ್ರಾರಂಭವಾಗುತ್ತಿದೆ.
ಅವಸರದಿಂದ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಬೇಕಾದರೆ ಶಾಲೆ, ಚಿತ್ರಮಂದಿರ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯೋಗಿಗಳ ಕೆಲಸದ ಸಮಯವನ್ನು ಬದಲಾಯಿಸಿದರೆ ಸ್ವಲ್ಪಮಟ್ಟಿಗೆ ವಾಹನ ದಟ್ಟಣೆ ತಪ್ಪಿಸಬಹುದು. ಕುಡಿದು ವಾಹನ ಓಡಿಸುವ ಚಾಲಕರು ತಾವು ಸಾಯುವುದರ ಜತೆಗೆ ಇತರರ ಜೀವವನ್ನು ತೆಗೆಯುತ್ತಾರೆ. ತಮ್ಮ 22ನೇ ವಯಸ್ಸಿನಲ್ಲಿ ಚಕ್ರವ್ಯೂಹ ಚಿತ್ರದ ಶೂಟಿಂಗ್ ಮುಗಿಸಿಕೊಂಡು 140 ಕಿ.ಮೀ. ವೇಗದಲ್ಲಿ ಕಾರಿನಲ್ಲಿ ಬರುತ್ತಿದ್ದೆ. ಆಗ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಕ್ಷಣಮಾತ್ರದಲ್ಲಿ ನಡೆದ ಆ ಘಟನೆ ಇಂದಿಗೂ ಮರೆಯಾಗಿಲ್ಲ ಎಂದರು.