ಮರು ನಿರ್ಮಿಸಿದ ಶೌಚಾಲಯ ಉದ್ಘಾಟನೆ
ಅವ್ಯವಹಾರದಿಂದ ಕಟ್ಟಿಸಿದ ಅರಮನೆಗಿಂತ, ಜನ ಸಾಮಾನ್ಯರ ಹಿತಾಸಕ್ತಿಯಿಂದ ಸಾರ್ವಜನಿಕರೇ ಕಟ್ಟಿದ ಶೌಚಾಲಯವೇ ಮೇಲು' ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು...
ಬೆಂಗಳೂರು: `ಅವ್ಯವಹಾರದಿಂದ ಕಟ್ಟಿಸಿದ ಅರಮನೆಗಿಂತ, ಜನ ಸಾಮಾನ್ಯರ ಹಿತಾಸಕ್ತಿಯಿಂದ ಸಾರ್ವಜನಿಕರೇ ಕಟ್ಟಿದ ಶೌಚಾಲಯವೇ ಮೇಲು' ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಯಲಹಂಕ ಪೊಲೀಸ್ ಠಾಣೆಯ ಮುಂದೆ ಖಾಸಗಿ ವ್ಯಕ್ತಿಗಳು ಕೆಡವಿದ್ದ ಸಾರ್ವಜನಿಕ ಶೌಚಾಲಯವನ್ನು ಬಳಿಕ ಸಾರ್ವಜನಿಕರೇ ಕಟ್ಟಿದ ಶೌಚಾಲಯ ಉದ್ಘಾಟಿಸಿ ಮಾತನಾಡಿದ ಅವರು, ಮಾಲ್ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಇದನ್ನು ಕೆಡವಿದ್ದು ಬೇಸರ ತರಿಸುವಂತದ್ದು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಧ್ವಂಸಗೊಳಿಸಿದವರು ಯಾರು ಎಂಬುದನ್ನು ಪತ್ತೆಹಚ್ಚದೆ ನಿರ್ಲಕ್ಷಿಸಿದ್ದಾರೆ. ಅಲ್ಲದೆ, ಬಿಬಿಎಂಪಿ ತನ್ನ ಕರ್ತವ್ಯವನ್ನೂ ಮರೆತಂತೆ ಕಾಣುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರವು ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಇದೆ ಎನ್ನುವಂತಾಗಿದೆ. ಇಂತಹ ನಿರ್ಲಕ್ಷ್ಯ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆತಂಕ ವ್ಯಕ್ತಪಡಿಸಿದರು.
`ಶೌಚಾಲಯ ಉದ್ಘಾಟನೆಗೂ ಬರುವ ಮುನ್ನ ಕೆಲವರು ಈ ಕಾರ್ಯಕ್ರಮದ ಬಗ್ಗೆ ಗೇಲಿ ಮಾಡಿದ್ದರು. ಆದರೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಈ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಿಂದ ಬಂದಿದ್ದೇನೆ. ಕಾರ್ಯಕ್ರಮದ ನಂತರ ಮಂಗಳೂರಿಗೆ ಹೋಗಬೇಕಿದೆ. ನನ್ನ ಆತ್ಮ ಸಂತೃಪ್ತಿಗಾಗಿ ಇಂತಹ ಜನಪರ ಕಾರ್ಯಕ್ರಮಗಳಲ್ಲಿ ಭಾಗವಸುತ್ತೇನೆ' ಎಂದು ಹೇಳಿದರು.
`ಲೌಡ್‍ಶೌಟ್' ಸಂಘಟನೆ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಸಾರ್ವಜನಿಕರ ಸಹಕಾರದಿಂದ ಶೌಚಾಲಯ ನಿರ್ಮಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯಕ್ಕೆ ನೀರು, ವಿದ್ಯುತ್ ಸಂಪರ್ಕ ನೀಡಬೇಕು. ಅದೇ ರೀತಿ ಸುತ್ತಮುತ್ತಲ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಖಾಸಗಿ ವ್ಯಕ್ತಿಗಳು ಮತ್ತೆ ಈ ಶೌಚಾಲಯ ಕೆಡವುವ ಕುತಂತ್ರ ಬಿಟ್ಟು, ಜನ ಸಾಮಾನ್ಯರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಕನ್ನಡಪ್ರಭದ ವ್ಯಂಗ್ಯಚಿತ್ರಕಾರ ಎಸ್.ಪದ್ಮನಾಭ ಅವರು ಧನಶಕ್ತಿ v/s ಜನಶಕ್ತಿ ಎಂಬ ಶೀರ್ಷಿಕೆಯಡಿ ವ್ಯಂಗ್ಯಚಿತ್ರ ಬಿಡಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಲೌಡ್‍ಶೌಟ್ ಸಂಘಟನೆಯ ಉಪಾಧ್ಯಕ್ಷ ಅಟ್ಟೂರು ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ಮುರಳೀಧರ್, ರಫೀಕ್ ಪಾಷಾ, ಶಶಿಕಾಂತ್, ಸಂದೀಪ್, ಮುಖೇಶ್, ಸುರೇಶ್ ಮತ್ತಿರರರು ಇದ್ದರು.