ಬೆಂಗಳೂರು: ಕಾವೇರಿ ಜಂಕ್ಷನ್ ನಲ್ಲಿ ವಿದೇಶಿ ಮದ್ಯ ಬಾಟಲಿಯಿಟ್ಟು (ಅನುಮಾನಾಸ್ಪದ ವಸ್ತು) ಶುಕ್ರವಾರ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಮುಳುಗಿದ್ದ ನಗರದ ಜನತೆಯನ್ನು ಕೆಲ ಕಾಲ ಬೆಚ್ಚಿ ಬೀಳಿಸಿದ್ದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಮದ್ಯದ ಬಾಟಲಿ ಪತ್ತೆಯಾದ ಜಾಗದ ಅಜುಬಾಜಿನ ಮನೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಶನಿವಾರ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಅಂತೆಯೇ ಆ ವಿದೇಶಿ ಮದ್ಯದ ಬಾಟಲಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ.
ಅಲ್ಲದೇ ಬಾಟಲಿ ದೊರತ ಸುಮಾರು 30 ಮಿಲಿ ಲೀಟರ್ ಮದ್ಯದ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಪ್ರಕರಣ ಸಂಬಂಧ ದೇವನಹಳ್ಳಿ ಆಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳನ್ನೂ ಸಂಪರ್ಕಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.