ಕೃಷ್ಣರಾಜಪುರ: ಅಕ್ಕಪಕ್ಕದ ಮನೆಗಳ ಚಿಲಕ ಹಾಕಿ ಮನೆಗಳ ಸರಣಿಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಸಾಮಾನ್ಯವಾಗಿ ಕಳ್ಳತನವಾದಾಗ ಕಳ್ಳರಿಗೆ ಸಾವಿರಾರು ರು. ಮೌಲ್ಯದ ಚಿನ್ನಾಭರಣಗಳೋ ಅಥವಾ ನಗದೋ ಸಿಗುವುದು ಕೇಳಿದ್ದೇವೆ. ಆದರೆ, ಇಲ್ಲಿ ಎರಡು ಮನೆಗಳನ್ನು ಕಳ್ಳತನ ಮಾಡಿರುವ ದುಷ್ಕರ್ಮಿಗಳಿಗೆ ಸಿಕ್ಕಿರುವ ಮೊತ್ತ ಕೇವಲ ರು.500 ಮಾತ್ರ!
ಈ ಘಟನೆ ಕೆ.ಆರ್.ಪುರಂನ ದೇವಸಂದ್ರದಲ್ಲಿ ಭಾನುವಾರ ನಡೆದಿದೆ. ದೇವಸಂದ್ರದ ಆಂಜನೇಯ ದೇವಸ್ಥಾನದ ಬಳಿಯಿರುವ ಅಪಾಟ್ರ್ ಮೆಂಟ್ ಮಾದರಿಯ 3 ಮನೆಗಳಲ್ಲಿ
ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ. ಅಪಾಟ್ರ್ ಮೆಂಟ್‍ನಲ್ಲಿರುವ 6 ಮನೆಗಳಲ್ಲಿ ಮೂರು ಮನೆಗಳ ಬಾಡಿಗೆದಾರರು ಸಂಕ್ರಾಂತಿ ಅಂಗವಾಗಿ ತಮಿಳುನಾಡಿನ ಕೊಯಮತ್ತೂರಿಗೆ ಹೋಗಿದ್ದರು. ಇದನ್ನು ಗಮನಿಸಿದ ಕಳ್ಳರು 6 ಮನೆಗಳಲ್ಲಿ ಮೂರು ಮನೆಗಳಿಗೆ ಹೊರಭಾಗದಿಂದ ಚಿಲಕವನ್ನು ಹಾಕಿದ್ದಾರೆ.
ನಂತರ 3 ಮನೆಗಳ ಬಾಗಿಲು ಒಡೆದು ಕಳ್ಳತನಕ್ಕೆ ಸಜ್ಜಾಗಿದ್ದಾರೆ. ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದಾರೆ. ಬಿರುವಿನಲ್ಲಿರುವ ಬಟ್ಟೆ ಎಲ್ಲವನ್ನು ಹೊರಗೆ ಎಸೆದಿದ್ದಾರೆ.
ಆ ಮೂರು ಮನೆಗಳನ್ನು ಶೋಧ ಮಾಡಿದರೂ ಅವರು ನಿರೀಕ್ಷೆ ಮಾಡಿದಷ್ಟು ದುಡ್ಡು ಸಿಕ್ಕಿಲ್ಲ. ಕೊನೆಗೆ `ಪಾಲಿಗೆ ಬಂದಿದ್ದು ಪಂಚಾಮೃತ' ಅಂತಾ ಮೂರರಲ್ಲಿ ಎರಡು ಮನೆಗಳಲ್ಲಿದ್ದ ರು.500 (ತಲಾ 250) ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಮನೆಗಳಿಗೆ ಚಿಲಕ ಹಾಕಿರುವುದು ತಿಳಿಯದ ಮನೆಯವರು ಬೆಳಗ್ಗೆ ಮನೆಯಿಂದ ಹೊರಬರಲು ಬಾಗಿಲನ್ನು ಎಳೆದಾಡಿದ್ದಾರೆ. ಎಷ್ಟೇ ಜಗ್ಗಾಡಿದರೂ ಬಾಗಿಲ ತೆರೆಯದರಿಂದ ಗಾಬರಿಗೊಂಡು, ಕೂಡಲೇ ಅಕ್ಕ-ಪಕ್ಕದ ಮನೆಯವರ ನೆರವು ಪಡೆದು ಮನೆಗಳ ಚಿಲಕಗಳನ್ನು ತೆಗೆಸಿ ಹೊರಬಂದಿದ್ದಾರೆ.
ಅನುಮಾನಗೊಂಡ ಅಪಾಟ್ರ್ ಮೆಂಟ್ ಮಾಲೀಕ ಲೋಕೇಶ್ ಖಾಲಿಯಿದ್ದ ಮನೆಗಳನ್ನು ಗಮನಿಸಿದ್ದಾರೆ. ಕಳ್ಳತನವಾಗಿರುವುದು ತಿಳಿದು ಬಂದ ನಂತರ ಕೆ.ಆರ್.ಪುರಂ ಠಾಣೆಗೆ ದೂರು ನೀಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಬಾಡಿಗೆದಾರರು ಊರಿಗೆ ಹೋಗುವುದನ್ನೇ ಗಮನಿಸುತ್ತಿದ್ದ ಸ್ಥಳೀಯರೇ ಈ ಕೆಲಸ ಮಾಡಿದ್ದಾರೆ ಎಂದು ಮನೆ ಮಾಲೀಕರು ಹಾಗೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ಕೆ.ಆರ್.ಪುರಂ ಠಾಣೆಯಲ್ಲಿ ದಾಖಲಾಗಿದೆ.