ಬೆಂಗಳೂರು: ಮೌನ ಮಾತಿನಂತರಕ್ಕ ನಾ ಸತ್ತು ಸತ್ತು ಹುಟ್ಟಿ ಬಂದೆ ನಾ...ಜನುಮ ಜನುಮ ಸ್ವತ್ತು ದನಿ ಕಳೆದುಕೊಂಡು ಅತ್ತೆ... ಸ್ಫೋಟಗೊಳ್ಳಲೆಂದ ಹೊತ್ತು ಸುಮ್ಮನಿರಬೇಕೇನಾ ಇವತ್ತು... ಎಂಬ ತಮ್ಮ ಕವಿತೆ ವಾಚಿಸುವ ಮೂಲಕ ಮಹಿಳಾ ಅಭಿವ್ಯಕ್ತಿ ಚಿಂತನ-ಮಂಥನಕ್ಕೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಡಿಪಾಯ ಹಾಕಿದರು.
ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ `ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಮಹಿಳಾ ಅಭಿವ್ಯಕ್ತಿ' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ಅಭಿವ್ಯಕ್ತಿಗೆ ಪ್ರತಿ ಹಂತದಲ್ಲೂ ಸವಾಲುಗಳು ಎದುರಾಗುತ್ತಾ ಬಂದಿದೆ. ಅವುಗಳನ್ನು ಎದುರಿಸಿ ಹೋರಾಡಬೇಕಿದೆ. ಮಹಿಳೆಯನ್ನು ಕುಟುಂಬ, ಪರಂಪರೆ, ಸಂಪ್ರದಾಯ ಎಂಬ ಪದಗಳಲ್ಲಿ ಬಂಧಿಸಲಾಗಿದೆ. ಇಂದಿಗೂ ಸಂಪೂರ್ಣ ಸಾಮಾಜಿಕ ನ್ಯಾಯ ದೊರೆತಿಲ್ಲ. ನೀನು ಹೀಗೇ ಇರಬೇಕೆಂದು ಗೃಹಿಣಿಯ ಲಕ್ಷಣಗಳನ್ನು ಹೇರಲಾಗಿದೆ ಎಂದರು.
ಸುಗ್ಗಿ ಕಾಲ ಎಂದು ಕರೆಯಲಾಗುವ 1950ರ ಕಾಲಘಟ್ಟದಲ್ಲಿ ಕಾವ್ಯದಂತೆ ಕಥೆ, ಕಾದಂಬರಿಗಳಲ್ಲಿ ಮಹಿಳೆಯರು ತಮ್ಮ ಅಭಿವ್ಯಕ್ತಿ ತೋರಿದ್ದಾರೆ. ಮಹಿಳೆಯರ ಶಿಕ್ಷಣ, ದೌರ್ಜನ್ಯ, ತಾರತಮ್ಯ, ವರದಕ್ಷಿಣೆ, ವೇಶ್ಯಾವಾಟಿಕೆ ವ್ಯವಸ್ಥೆ ವಿರುದ್ಧ ದನಿ ಎತ್ತಿದ್ದಾರೆ. ಅಲ್ಲದೇ ಅನೇಕ ಲೇಖಕಿಯರು ದಲಿತ, ಕೆಳವರ್ಗದ ಮಹಿಳೆಯರ ಮೇಲಾಗುವ ಶೋಷಣೆಗಳನ್ನು ತಮ್ಮ ಬರವಣಿಗೆ ಮೂಲಕ ಹೊರಗೆಡವಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಮರ್ಶಕನರಹಳ್ಳಿ ಬಾಲಸುಬ್ರಹ್ಮಣ್ಯ ಮಾತ- ನಾಡಿ, ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರನ್ನು ಗುರುತಿಸಿ ಕನ್ನಡ ಸಂಸ್ಕೃತಿಯನ್ನು ಕಟ್ಟಬೇಕಾದ ಅಗತ್ಯವಿ ದೆ. ಅದರೊಂದಿಗೆ ಹೆಣ್ಣಿನ ಬಹುಮುಖ ವ್ಯಕ್ತಿತ್ವದ ನೆಲೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು- ಹೇಳಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ನಾವು ವೈಜ್ಞಾನಿಕವಾಗಿ ಮುಂದುವರೆ ದಿದ್ದರೂ ಸಹಜೀವಿಗಳ ಬಗ್ಗೆ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ. ಸಾಮಾಜಿಕ ಅಸಮಾನತೆ, ತಾರತಮ್ಯ ಹೆಚ್ಚಾಗುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಇಂದಿಗೂ ಮೌಢ್ಯತೆಗೆ ಮಹಿಳೆಯೇ ಬಲಿಯಾಗುತ್ತಿದ್ದಾಳೆ. ಮಹಿಳಾ ಕಾನೂನು ಜಾರಿಯಾಗಿದ್ದರೂ ಅದರ ಸದುಪಯೋಗವಾಗುತ್ತಿಲ್ಲ ಎಂದರು. `ಹೋರಾಟದ ಹಾದಿಯಲ್ಲಿ' ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಡಾ.ಇ.ಆರ್.ರತಿ ರಾವ್, ಮಹಿಳಾ ಸಮಸ್ಯೆಗಳಿಗೆ ಇತರ ಸಂಘಟನೆಗಳೂ ಕೈ ಜೋಡಿಸುತ್ತಿದ್ದವು. ಆದರೆ ಸಂಘಟನೆಗಳಲ್ಲಿ ಹಿಂದೆ ಇದ್ದಂತಹ ಒಗ್ಗಟ್ಟಿಲ್ಲ. ಅವರವರ ಕಾರ್ಯ ನೋಡಿಕೊಳ್ಳಲಿ ಎಂಬ ಮನೋಭಾವ ಮೂಡಿರುವುದು ದುರಂತ ಎಂದರು.
ಲೇಖಕಿ ರೂಪ ಹಾಸನ ಮಾತನಾಡಿ, ಮುಖ್ಯವಾಹಿನಿಗಳಲ್ಲಿ ಚರ್ಚಿಯಾಗುವ ವಿಷಯಗಳಲ್ಲಿ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುವ ಜತೆಗೆ ಹಕ್ಕುಗಳಿಂದಲೂ ವಂಚಿತರಾಗಿದ್ದಾರೆ.
ಅವರಿಗೆ ಶಿಕ್ಷಣದ ಮೂಲಕ ಸಂವೇದನೆ ಮೂಡಿಸಬೇಕಿದೆ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಚಿತ್ರ ನಾಟ್ಯ ಸಂಸ್ಥೆಯ ಎಲ್.ಜಿ.ಮೀರಾ, ಸುಧಾ ಶರ್ಮ ಚವತ್ತಿ, ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಎಸ್.ಪಿ.ಸುರೇಶ್, ಲೇಖಕಿ ಧರಣಿದೇವಿ ಮಾಲಗತ್ತಿ ಮುಂತಾದವರು ಪಾಲ್ಗೊಂಡಿದ್ದರು.