ಬೆಂಗಳೂರು: ಮಾಲಿನ್ಯ ನಿರೋಧಕ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಡೆಯಬಲ್ಲ ಎರಡು ಮುಖಗವಸುಗಳನ್ನು ಕಂಡುಹಿಡಿಯಲಾಗಿದೆ. ಇದು ಒಮ್ಮೆ ಬಳಸಿ ಎಸೆಯುವುಂತಹ ಮಾಸ್ಕ್ ಆಗಿರದೆ 6 ತಿಂಗಳ ಕಾಲ ಉಪಯೋಗಿಸಬಹುದು ಎಂದು ವಿಕ್ರಮ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಪೈ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಾಹನ ದಿಟ್ಟಣೆ ಪ್ರದೂಷಣೆಯಲ್ಲಿ ತುತ್ತಾಗುತ್ತಿರುವವರಲ್ಲಿ ಸಂಚಾರ ಪೊಲೀಸರೇ ಹೆಚ್ಚು ಆ ಕಾರಣ 300 ಮುಖಗವಸುಗಳನ್ನು ಸಂಚಾರ ಪೊಲೀಸರಿಗೆ ವಿತರಿಸಲಾಗಿದೆ. ಇದು ಕೇವಲ ಪೊಲೀಸರಿಗೆ ಮಾತ್ರವಲ್ಲದೆ ಎಲ್ಲರೂ ಧರಿಸಬಹುದು ಎಲ್ಲ ಔಷಧಾಲಯದಲ್ಲಿ ಲಭ್ಯವಿದೆ ಎಂದರು.
ಶ್ವಾಸಕೋಶದ ಕ್ಯಾನ್ಸರ್ ಮಾರಕ ಕಾಯಿಲೆಯಾಗಿದ್ದು, ಅದರ ದಟ್ಟಣೆಯಲ್ಲಿ ಕೆಲಸ ಮಾಡುವ ಪೊಲೀಸರ ಉಸಿರಿನೊಂದಿಗೆ ವಿಷಕಾರಿ ಹೊಗೆ ಹಾಗೂ ಧೂಳು ಸೇರಿದಂತೆ ಮಾಲನ್ಯ ನಿರೋಧಕ ಮುಖಗವಸು ತಡೆಯುತ್ತದೆ. ಇದಕ್ಕೆ 0.3 ಮೈಕ್ರಾನ್ ಗಳಷ್ಟು ಸೂಕ್ಷ್ಮ ಕಣಗಳನ್ನು ತಡೆಯುವ ಶಕ್ತಿಯಿದೆ. ಹಾಗೆಯೇ ಅದನ್ನು ತೊಳೆದು ಮರುಬಳಕೆ ಮಾಡಬಹುದು ಎಂದರು.
ಡಾ.ವಿಜಯ್ ಕುಮಾರ್ ಮಾತನಾಡಿ, ಮುಂಚೂಣಿಯಲ್ಲಿರುವ 5 ಪ್ರಮುಖ ಕ್ಯಾನ್ಸರ್ ಗಳಿಗೆ ಸಂಬಂಧಿಸಿದಂತೆ ಎಲ್ಲರಿಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ಪರೀಕ್ಷೆ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಹೇಳಿದರು.
ಸಂಚಾರ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಮಾತನಾಡಿ, ಸಾಕಷ್ಟು ಸಂಚಾರ ಪೊಲೀಸರಿಗೆ ಉಸಿರಾಟದ ತೊಂದರೆ ಹೆಚ್ಚಿದೆ. ಆದ್ದರಿಂದ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶ ಅಂದರೆ ಸಿಲ್ಕ್ ಬೋರ್ಡ್, ಕೆ.ಆರ್.ಪುರಂ ಔಟರ್ ರಿಂಗ್ ರೋಡ್ ಗಳಲ್ಲಿ ಪೊಲೀಸರಿಗೆ ನೀಡುತ್ತೇವೆ ಎಂದು ತಿಳಿಸಿದರು.