ಅಡಮಾನ ಕಟ್ಟಡ ಮರುವಶ
ಹಣಕಾಸು ಸಮಸ್ಯೆ ಕಾರಣ 2011-12 ಮತ್ತು 2012-13ನೇ ಸಾಲಿನಲ್ಲಿ ಹುಡ್ಕೋಗೆ ಅಡಮಾನವಿಟ್ಟಿದ್ದ 11 ಪಾರಂಪಾರಿಕ ಕಟ್ಟಡಗಳ ಪೈಕಿ ಮೆಯೋಹಾಲ್ ಕೋರ್ಟ್ ಹಾಗೂ ಕೆಂಪೇಗೌಡ ಮ್ಯೂಸಿಯಂಗಳನ್ನು ಮರುವಶಕ್ಕೆ ಪಡೆಯುವಲ್ಲಿ ಪಾಲಿಕೆ.ಯಶಸ್ವಿಯಾಗಿದೆ...
ಬೆಂಗಳೂರು: ಹಣಕಾಸು ಸಮಸ್ಯೆ ಕಾರಣ 2011-12 ಮತ್ತು 2012-13ನೇ ಸಾಲಿನಲ್ಲಿ ಹುಡ್ಕೋಗೆ ಅಡಮಾನವಿಟ್ಟಿದ್ದ 11 ಪಾರಂಪಾರಿಕ ಕಟ್ಟಡಗಳ ಪೈಕಿ ಮೆಯೋಹಾಲ್ ಕೋರ್ಟ್ ಹಾಗೂ ಕೆಂಪೇಗೌಡ ಮ್ಯೂಸಿಯಂಗಳನ್ನು ಮರುವಶಕ್ಕೆ ಪಡೆಯುವಲ್ಲಿ ಪಾಲಿಕೆ.ಯಶಸ್ವಿಯಾಗಿದೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ, ಉಪಮೇಯರ್ ಹೇಮಲತಾ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ, ಹುಡ್ಕೋ ಬ್ಯಾಂಕ್ ಅಧಿಕಾರಿಗಳು ಹಾಗೂ ನಗರ ಶಾಸಕರ ಸಮ್ಮುಖದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಎರಡು ಕಟ್ಟಡಗಳ ದಾಖಲೆಗಳನ್ನು ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, ಬಿಜೆಪಿ ಆಡಳಿತ ಅವಧಿಯಲ್ಲಿ ಬಿಬಿಎಂಪಿ ಮೆಯೋಹಾಲ್, ಕೆ.ಆರ್.ಮಾರುಕಟ್ಟೆ, ಕೆಂಪೇಗೌಡ ಮ್ಯೂಸಿಯಂ ಸೇರಿ 11 ಆಸ್ತಿಗಳನ್ನು ಅಡಮಾನವಿಟ್ಟು ವಿವಿಧ ಬ್ಯಯಾಂಕ್ ಗಳಿಂದ ಸಾಲ ಪಡೆಯಲಾಗಿತ್ತು. ಹುಡ್ಕೋ ಬ್ಯಾಂಕ್ ನಿಂದ ಒಟ್ಟು 1645,85 ಕೋಟಿ ಸಾಲ ಪಡೆದಿದ್ದು, ಬ್ಯಾಂಕ್ ಗೆ ನಿರಂತರವಾಗಿ ಅಸಲು, ಬಡ್ಡಿ ಪಾವತಿಸಲಾಗಿದೆ. ಬಿಬಿಎಂಪಿಯಲ್ಲಿ ನೂತನ ಆಡಳಿತ ಜಾರಿಗೆ ಬಂದ ನಂತರ ಹುಡ್ಕೋಗೆ ಮೊದಲ ಕಂತಿನಲ್ಲಿ 245 ಕೋಟಿ ಪಾವತಿಸಿದ್ದು, ಇಲ್ಲಿಯವರೆಗೆ ಬ್ಯಾಂಕ್ ಗೆ ಒಟ್ಟಾರೆ ರು.435.94 ಕೋಟಿ ಪಾವತಿಯಾಗಿರುವುದರಿಂದ ಎರಡು ಕಟ್ಟಡಗಳು ಪಾಲಿಕೆ ವಶಕ್ಕೆ ಬಂದಿವೆ ಎಂದು ಹೇಳಿದರು.
ನಗರದ ಪ್ರಮುಖ ಆಸ್ತಿಗಳನ್ನು ಹುಡ್ಕೋ ಹಾಗೂ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಅಡಮಾನವಿಟ್ಟು, ಪಾಲಿಕೆ ಸಾವಿರಾರು ಕೋಟಿ ಸಾಲ ಪಡೆದಿದೆ. ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಉಳಿದ 9 ಆಸ್ತಿಗಳನ್ನು ವಶಕ್ಕೆ ಪಡೆಯಲಾಗುವುದು. ಹುಡ್ಕೋ ಶೇ.10.15ರ ದರದಲ್ಲಿ 665 ಕೋಟಿ ಸಾಲ ನೀಡುವುದಾಗಿ ತಿಳಿಸಿದೆ.