ಬೆಂಗಳೂರು: ಬಡವರಿಗಾಗಿ ಮೀಸಲಿಟ್ಟಿದ್ದ ಸುಮಾರು ರು.150 ಕೋಟಿ ಮೌಲ್ಯದ 10.4 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಕಂದಾಯ ಅಧಿಕಾರಿಗಳು, ಸ್ಥಳೀಯ ತಹಸೀಲ್ದಾರರು ಸೇರಿ ಅಕ್ರಮವಾಗಿ ಪರಭಾರೆ ಮಾಡಿರುವ ಪ್ರಕರಣ ಲೋಕಾಯುಕ್ತ ಮೆಟ್ಟಿಲೇರಿದೆ.
ಈ ಸಂಬಂಧ ಜನಾಧಿಕಾರ ಸಂಘರ್ಷ ಪರಿಷತ್ ಶನಿವಾರ ಉಪಲೋಕಾಯುಕ್ತ ಆನಂದ್ ಹಾಗೂ ಲೋಕಾ ಎಡಿಜಿಪಿ ಪರ ಶಿವಮೂರ್ತಿ ಅವರಿಗೆ ದಾಖಲೆಗಳ ಸಮೇತ ದೂರು ನೀಡಿದೆ. ಬಡವರಿಗೆ ಮೀಸಲಿಟ್ಟಿದ್ದ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಜಮೀನನ್ನು ವಿಶೇಷ ಜಿಲ್ಲಾಧಿಕಾರಿ ರಾಮಾಂಜನೇಯ, ಉಪವಿಭಾಗಧಿಕಾರಿ ಎಲ್.ಸಿ.ನಾಗರಾಜ್, ಬೆಂಗಳೂರು ದಕ್ಷಿಣ ತಹಶೀಲ್ದಾರ್, ಕಂದಾಯ ಅಧಿಕಾರಿ ಹಾಗೂ ಬಿಡಿಎ ಅಧಿಕಾರಿಗಳು ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಐಪಿಸಿ ಕಾಯ್ದೆ, ಕರ್ನಾಟಕ ಭೂಸುಧಾರಣೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಮನವಿ ಮಾಡಿದೆ.
ಕಾಂಗ್ರೆಸ್ ನಾಯಕ ಸಾಥ್
ಬಡವರು ಅಥವಾ ನಿರಾಶ್ರಿತರಿಗೆ ವಸತಿ ಕೊಡುವ ಉದ್ದೇಶದಿಂದ 2007ರಲ್ಲಿ ಅಂದಿನ ಸರ್ಕಾರ, ಬೆಂಗಳೂರು ಪೂರ್ವ, ದಕ್ಷಿಣ ಉತ್ತರ ವಲಯದ ಸುತ್ತಮುತ್ತ ಇದ್ದ ಸರ್ಕಾರಿ ಜಮೀನು ಸುಮಾರು 326 ಎಕರೆ 18 ಗುಂಟೆ ಜಮೀನನ್ನು ಬಿಡಿಎಗೆ ಹಸ್ತಾಂತರ ಮಾಡಿ ಆದೇಶ ಹೊರಡಿಸಿತ್ತು. ಇದರ ಅನ್ವಯ ಬೇಗೂರು ಹೋಬಳಿಯ ದೊಡ್ಡ ತೋಗೂರು ಗ್ರಾಮ ಸರ್ವೆ ನಂಬರ್ 105ರಲ್ಲಿ 10 ಎಕರೆ 22 ಗುಂಟೆ ಜಮೀನನ್ನು ಮೀಸಲಿಟ್ಟಿತ್ತು. ಆದರೆ, ಬಿಡಿಎ ವಶದಲ್ಲಿದ್ದ ಈ ಜಮೀನನ್ನು ಅಣ್ಣಯ್ಯಪ್ಪ ಮತ್ತು ಇತರೆ ನಾಲ್ವರು ಖಾಗಸಿ ವ್ಯಕ್ತಿಗಳು ಅಕ್ರಮವಾಗಿ ಅಧಿಕಾರಿಗಳೊಂದಿಗೆ ಸೇರಿ ಪರಭಾರೆ ಮಾಡಿಕೊಂಡಿದ್ದಾರೆ. ಅಲ್ಲದೆ ಸ್ಥಳೀಯ ಕಾಂಗ್ರೆಸ್ ನಾಯಕ ಪ್ರಭಾಕರ್ ರೆಡ್ಡಿ ಈ ಜಾಗದಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಪರಿಷತ್ ದೂರಿನಲ್ಲಿ ಉಲ್ಲೇಖಿಸಿದೆ.