ಬೆಂಗಳೂರು: ಕೋಲಾರದ ಚಿಂತಾಮಣಿಯಲ್ಲಿ ನಾಗೇಶರಾವ್ ಹಾಗೂ ನಾಗಮ್ಮ ದಂಪತಿಗೆ 1934ರ ಜೂ.30ರಂದು ಜನಿಸಿದ ಚಿಂತಾಮಣಿ ನಾಗೇಶ ರಾಮಚಂದ್ರರಾವ್ ತಮ್ಮ ಬಾಲ್ಯದಲ್ಲಿ ಬಹುತೇಕ ಸಮಯ ಕಳೆದದ್ದು ಇಲ್ಲಿನ ಬಸವನಗುಡಿಯಲ್ಲಿ.
ತಮ್ಮ ತಾಯಿಯಿಂದ ಪೌರಾಣಿಕ ಕತೆಗಳು ಹಾಗೂ ಪೂಜಾ ಕಾರ್ಯ ಕುರಿತು ಅರಿತುಕೊಳ್ಳುತ್ತಿದ್ದ ರಾವ್, 6 ವರ್ಷ ತುಂಬುವಷ್ಟರಲ್ಲಿ ರಾಮಾಯಣ ಹಾಗೂ ಮಹಾಭಾರತದ ಎಲ್ಲಾ ಅಧ್ಯಾಯಗಳ ಬಗ್ಗೆ ತಿಳಿದುಕೊಂಡಿದ್ದರು. ಇದು ಅವರ ಆಧ್ಯಾತ್ಮ ಜೀವನದ ಮೇಲೆ ಪ್ರಭಾವ ಬೀರಿತ್ತು.
ಎರಡನೇ ವಿಶ್ವಯುದ್ಧ: ತಂದೆ ತಮ್ಮ ಮಗ ಆಂಗ್ಲಭಾಷೆ ಮಾತನಾಡಬೇಕು ಎಂಬ ಮಹಾದಾಸೆ ಹೊಂದಿದ್ದರು. ಈ ನಿಟ್ಟಿನಲ್ಲಿ ಮಗನಿಗೆ ತರಬೇತಿ ನೀಡುತ್ತಿದ್ದರು. ಇದರಿಂದ ರಾವ್ ಅವರಿಗೆ ಮನೆಯಲ್ಲೇ ಶೈಕ್ಷಣಿಕ ವಾತಾವರಣ ದೊರಕಿತ್ತು. ಶಾಲಾ ದಿನಗಳಲ್ಲಿ ಎರಡನೇ ವಿಶ್ವಯುದ್ಧ ಆರಂಭಗೊಂಡಿತ್ತು. ಈ ನಡುವೆ, ಭಾರತದಲ್ಲಿ ಎಲ್ಲೆಡೆ ಸ್ವಾತಂತ್ರ್ಯ ಸಂಗ್ರಾಮದ ಕಾವು ಏರಿತ್ತು. ಬಸವನಗುಡಿಯ ಆಚಾರ್ಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾವ್ ಅವರು, ಕೆಲ ಸ್ವಾತಂತ್ರ್ಯ ಸಭೆಗಳಲ್ಲಿ ಭಾಗವಹಿಸಿದ್ದರು. ಪಂಡಿತ್ ಜವಹರ್‌ಲಾಲ್ ನೆಹರು ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾಷಣಗಳು ಅವರ ಮೇಲೆ ಭಾರಿ ಪ್ರಭಾವ ಬೀರಿದ್ದವು.
ರಾಮನ್ ಎಫೆಕ್ಟ್: 1946ರಲ್ಲಿ ಕನ್ನಡ ಸಾಹಿತ್ಯ ದಿಗ್ಗಜರಾದ ಡಿ.ವಿ.ಗುಂಡಪ್ಪ ಹಾಗೂ ವಿಜ್ಞಾನಿ ಸಿ.ವಿ.ರಾಮನ್ ಮತ್ತಿತರರು ರಾವ್ ಸಿಎನ್‌ಆರ್ ರಾವ್ ಓದುತ್ತಿದ್ದ ಶಾಲೆಗೆ ಭೇಟಿ ನೀಡಿದ್ದರು. ಇದರಿಂದ ಅವರಿಗೆ ಸಿ.ವಿ.ರಾಮನ್ ಪ್ರಯೋಗಾಲಯಕ್ಕೆ ಭೇಟಿ ನೀಡುವ, ಅವರ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶ ದೊರಕಿತ್ತು. ರಾಮನ್ ಮಾತುಗಳು ರಾವ್ ಮೇಲೆ ಶಾಶ್ವತ ಪರಿಣಾಮ ಬೀರಿತ್ತು.
ವಿವಿಧೆಡೆ ವಿದ್ಯಾಭ್ಯಾಸ: ಶಾಲಾ ದಿನಗಳಿಂದಲೇ ರಸಾಯನ ಶಾಸ್ತ್ರದ ಕುರಿತು ಆಸಕ್ತಿ ಹೊಂದಿದ್ದ ರಾವ್, 1947ರಲ್ಲಿ ಪ್ರೌಢಶಾಲೆ ಪೂರೈಸಿದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿಎಸ್ಸಿ ಪದವಿ ಪೂರೈಸಿದರು. ಕಾಲೇಜು ವಿದ್ಯಾಭ್ಯಾಸ ಅವರಲ್ಲಿನ ಇಂಗ್ಲಿಷ್ ಭಾಷಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು, ಭಾಷಣ, ಚರ್ಚೆ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿತು. ಈ ಸಂದರ್ಭದಲ್ಲಿ ಅವರು ಸಂಸ್ಕೃತ ಭಾಷೆಯನ್ನು ಕೂಡ ಕಲಿತರು. 1951ರಲ್ಲಿ ಬಿಎಸ್ಸಿ ಪದವೀಧರರಾದ ನಂತರ ಸಾಕಷ್ಟು ನೌಕರಿಯ ಅವಕಾಶಗಳು ದೊರೆತರೂ, ಸಂಪಾದನೆಗಿಂತ ಜ್ಞಾನಾರ್ಜನೆಯ ಹಸಿವು ಹೆಚ್ಚಾಗಿದ್ದರಿಂದ ರಾವ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ಎಂಎಸ್ಸಿ ಪದವಿಗೆ ಅರ್ಜಿ ಸಲ್ಲಿಸಿದರು.
ಅರ್ಜಿ ಸಲ್ಲಿಸಿದ ಎರಡೇ ದಿನಗಳಲ್ಲಿ ಅಲ್ಲಿನ ದಾಖಲಾತಿಯ ಕುರಿತು ಟೆಲಿಗ್ರಾಂ ದೊರೆತಿತ್ತು. ಅಲ್ಲಿನ ಪ್ರೊ.ಜೋಷಿ ಅವರು ರಾವ್ ಅವರನ್ನು ಎಂಎಸ್ಸಿಯ ಆರಂಭದಲ್ಲೇ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದರು. ಇದರಿಂದ ವಿದ್ಯುತ್ ವ್ಯತ್ಯಯಗಳ ನಡುವೆಯೂ ರಾವ್ ಅವರಿಗೆ ಹಗಲುರಾತ್ರಿ ಅದ್ಯಯನ ಮಾಡುವ ಅನಿವಾರ್ಯತೆ ಎದುರಾಗಿತ್ತು. ನಂತರ ಇವರಿಗೆ ವಾರ್ಷಿಕ ವಿಜ್ಞಾನ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸುವ ಪ್ರಾತ್ಯಕ್ಷಿಕೆಗಳಿಗೆ ವಿಷಯಗಳನ್ನು ಸಂಗ್ರಹಿಸಿಕೊಡುವ ಜವಾಬ್ದಾರಿ ವಹಿಸಲಾಗುತ್ತಿತ್ತು. ಇದರಿಂದ ವಿವಿಗೆ ಭೇಟಿ ನೀಡುವ ಪ್ರಮುಖ ವಿಜ್ಞಾನಗಳೊಂದಿಗೆ ಸಂವಾದ ನಡೆಸುವ ಅವಕಾಶ ದೊರಕಿತ್ತು. ಇವರ ಪ್ರಥಮ ಸಂಶೋಧನಾ ವರದಿ 1954ರಲ್ಲಿ ಆಗ್ರಾ ವಿವಿಯ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿತ್ತು.
ದಾಖಲೆಯ ಪಿಎಚ್‌ಡಿ: 1953ರಲ್ಲಿ ಬೆಂಗಳೂರಿಗೆ ಮರಳಿದ ರಾವ್ ವಿವಿಯಿಂದ ಪ್ರೋತ್ಸಾಹ ಧನ ಪಡೆದು ಖಾರಾಗ್‌ಪುರದ ಐಐಟಿಯಲ್ಲಿ ಪಿಎಚ್‌ಡಿ ಪದವಿ ಪಡೆಯಲು ಅವಕಾಶ ದೊರಕಿತ್ತು. ಆದರೆ, ವಿದೇಶದಲ್ಲಿ ಸಂಶೋಧನೆ ಮಾಡಲು ಇಚ್ಚಿಸಿದ ರಾವ್, ನ್ಯೂಯಾರ್ಕ್‌ನ ಪುರ್ಡೈ ವಿವಿಯನ್ನು ಆರಿಸಿಕೊಂಡರು. ಮುಂಬೈನಿಂದ 20 ದಿನಗಳ ಕಾಲ ಹಡಗಿನಲ್ಲಿ ಸಂಚರಿಸಿದ ರಾವ್ ಸಂಶೋಧನಾ ಕ್ಷೇತ್ರದಲ್ಲಿ ತಮ್ಮ ಹೊಸ ಬದುಕು ಆರಂಭಿಸಿದ್ದರು. ಕೇವಲ ಎರಡು ವರ್ಷ 9 ತಿಂಗಳಲ್ಲಿ ಸಂಶೋಧನಾ ವರದಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ ರಾವ್, 1959ರಲ್ಲಿ ಬೆಂಗಳೂರಿಗೆ ಹಿಂದಿರುಗಿ ಐಐಎಸ್‌ಸಿಯಲ್ಲಿ ಉಪನ್ಯಾಸಕರಾಗಿ ನೇಮಕ ಹೊಂದಿದರು. ಇವರ ಪ್ರಥಮ ವೇತನ ರು. 500.
ಅಮೆರಿಕಾದ ಸಂಶೋಧನಾ ವ್ಯವಸ್ಥೆಗೆ ಹೋಲಿಸಿದರೆ ಐಐಎಸ್‌ಸಿ ತೀರಾ ಹಿಂದುಳಿದಿದ್ದರೂ, ಕತ್ತಲನ್ನು ಶಪಿಸುವ ಬದಲು ದೀಪ ಹಚ್ಚುವುದು ಉತ್ತಮ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದ ರಾವ್, ಕೇವಲ ಆರು ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಕಾರ್ಯ ಆರಂಭಿಸಿದ್ದರು. ಅಣ್ವಿಕ ಕಕ್ಷೆಯ ಸಂಕೇತಗಳನ್ನು ಬಳಸಿಕೊಂಡು ಅಲ್ಟ್ರಾವಾಯ್ಲೆಟ್ ಮತ್ತು ವಿಸಿಬಲ್ ಸ್ಪೆಕ್ಟ್ರೋಸ್ಕೋಪಿ ತಯಾರಿಕೆ ಕುರಿತ ಅವರ ಏಕವಿಷಯಕ ಪ್ರಬಂಧ 1960ರಲ್ಲಿ ಪುಸ್ತಕ ರೂಪದಲ್ಲಿ ಹೊರಬಂದಿತ್ತು.
ಈ ಸಂದರ್ಭದಲ್ಲಿ ಇವರಿಗೆ ಶ್ರೇಷ್ಠ ವಿಜ್ಞಾನಿ ಸಿ.ವಿ.ರಾಮನ್ ಅವರ ನೆರವಿನ ಹಸ್ತ ದೊರಕಿತ್ತು. ಇಷ್ಟೇ ಅಲ್ಲ, ಅವರ ಪ್ರಯೋಗಾಲಯದಲ್ಲಿ ಇನ್‌ಫ್ರೇಡೆಡ್ ಸ್ಪೆಕ್ಟ್ರಾ ಕುರಿತ ದಾಖಲಿಸಲು ಕೂಡ ಅನುವು ಮಾಡಿಕೊಟ್ಟಿದ್ದರು. ಇದು ಅವರ ಇನ್‌ಫ್ರೇಡೆಡ್ ಸ್ಪೆಕ್ಟೋಸ್ಕೋಪಿ ಪುಸ್ತಕ ಬರೆಯಲು ನೆರವಾಗಿತ್ತು.
ಜವಾಹರ್‌ಲಾಲ್ ನೆಹರು ಕೇಂದ್ರ: ಇವರ ಬದುಕಿನ ಇನ್ನೊಂದು ಮೈಲುಗಲ್ಲು ಎಂದರೆ 1967ರಲ್ಲಿ ಇಂಗ್ಲೆಂಡ್ ಫರಾಡೇ ಸೊಸೈಟಿಯಿಂದ ದೊರೆತ ಮಾರ್ಲೋ ಪದಕ. 33 ವರ್ಷದೊಳಗಿನ ವಿಜ್ಞಾನಗಳ ಭೌತ ರಸಾಯನಶಾಸ್ತ್ರ ಕ್ಷೇತ್ರದಲ್ಲಿನ ಸಾಧನೆಯನ್ನು ಗಣನೆಗೆ ತೆಗೆದುಕೊಂಡು ಈ ಪುರಸ್ಕಾರ ನೀಡಲಾಗಿತ್ತು. ಇದಾದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಮರಳಿದ ರಾವ್, 1976ರಲ್ಲಿ ಐಐಎಸ್‌ಸಿಯ ರಸಾಯನಶಾಸ್ತ್ರ ವಿಭಾಗದಲ್ಲಿ ಸಾಲಿಡ್ ಸ್ಟೇಟ್ ಮತ್ತು ಸ್ಟ್ರಕ್ಚರಲ್ ಕೆಮಿಸ್ಟ್ರಿ ಘಟಕ ಸ್ಥಾಪಿಸಿದರು. ನಂತರ 1984ರಲ್ಲಿ ನಿರ್ದೇಶಕರಾಗಿ ಬಡ್ತಿ ಹೊಂದಿದರು. ನಂತರ ಬೆಂಗಳೂರಿನ ಜಕ್ಕೂರಿನಲ್ಲಿ ಜವಾಹರ್‌ಲಾಲ್ ನೆಹರು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದು ಇವರ ಜೀವನದ ಅತಿ ದೊಡ್ಡ ಮೈಲುಗಲ್ಲಾಗಿದೆ.
ಇಸ್ರೇಲ್‌ನ ತೆಲ್ ಅವಿವ್ ವಿವಿಯ ಮಿಲಿಯನ್ ಡಾಲರ್ ಡ್ಯಾನ್ ಡೇವಿಡ್ ಅವಾರ್ಡ್‌ನ ನೆರವಿನೊಂದಿಗೆ ಸಿಎನ್‌ಆರ್ ರಾವ್ ಶೈಕ್ಷಣಿಕ ಫೌಂಡೇಷನ್ ಸ್ಥಾಪಿಸಿದರು. ಯುವಜನತೆ ಸಣ್ಣ ವಯಸ್ಸಿನಲ್ಲೇ ವಿಜ್ಞಾನದತ್ತ ಆಸಕ್ತಿ ತೋರದಿದ್ದಲ್ಲಿ ನಮ್ಮಲ್ಲಿರುವ ಎಲ್ಲಾ ವಿಜ್ಞಾನ ಹಾಗೂ ತಂತ್ರಜ್ಞಾನ ಎಲ್ಲವೂ ವ್ಯರ್ಥ ಎಂಬುದು ಅವರ ನಂಬಿಕೆ. ಇದನ್ನು ಅವರ ಪತ್ನಿ ಇಂದುಮತಿ ಹಾಗೂ ಕುಟುಂಬ ಸದಸ್ಯರು ಇದನ್ನು ನಿರ್ವಹಿಸುತ್ತಿದ್ದಾರೆ.
ಪ್ರೊ.ರಾವ್‌ಗೆ ಇಲ್ಲಿಯವರೆಗೆ 1,400ಕ್ಕೂ ಹೆಚ್ಚು ಸಂಶೋಧನೆಗಳನ್ನು ಮಂಡಿಸಿದ್ದು, 45 ಪುಸ್ತಕಗಳನ್ನು ಬರೆದಿದ್ದಾರೆ. ಇವರ ಸಾಧನೆಯನ್ನು ವಿಶ್ವಾದ್ಯಂತದ ಪ್ರಮುಖ ವೈಜ್ಞಾನಿಕ ಅಕಾಡೆಮಿಗಳು ಗುರುತಿಸಿದ್ದು, ಸದಸ್ಯತ್ವ ಹಾಗೂ ಪ್ರಶಸ್ತಿ ನೀಡಿ ಗೌರವಿಸಿವೆ. ಇವರಿಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ.
29ನೇ ವರ್ಷದಲ್ಲೇ ಎಚ್‌ಒಡಿ
1963ರಲ್ಲಿ ಕಾನ್ಪುರಕ್ಕೆ ಸ್ಥಳಾಂತರಗೊಂಡ ರಾವ್, 1976ರಲ್ಲಿ ಕಾನ್ಪುರದ ಐಐಟಿಗೆ ಸೇರಿಕೊಂಡರು. ಅದರ ನಿರ್ದೇಶಕ ಪಿ.ಕೆ.ಕೆಲ್ಕಾರ್ ಅವರು ರಾವ್ ಮೇಲೆ ಅಪರಿಮಿತ ವಿಶ್ವಾಸವಿಟಿಟ್ಟಿದ್ದು, 1964ರಲ್ಲಿ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದರು. ಆಗ ರಾವ್‌ಗೆ ಕೇವಲ 29 ವರ್ಷ. ಇದೇ ಸಂದರ್ಭದಲ್ಲಿ ಸಿ.ವಿ.ರಾಮನ್ ಅವರಿಂದ ಬಂದ ಪತ್ರ ಅವರ ಬದುಕನ್ನೇ ಬದಲಿಸಿತು. ರಾವ್ ಅವರು ಭಾರತೀಯ ವಿಜ್ಞಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದು ಅವರ ವಿಜ್ಞಾನದ ಕುರಿತ ಆಸಕ್ತಿಯನ್ನು ಸರಿಯಾದ ದಿಶೆಯಲ್ಲಿ ಕೊಂಡೊಯ್ಯಲು ನೆರವಾಯಿತು.