ಪರಿಮಳಾ ನಾಗಪ್ಪರದ್ದು ಚಿಹ್ನೆಯೇ ಇಲ್ಲದ ಪಕ್ಷ
ಕೊಳ್ಳೇಗಾಲ: ಮಾಜಿ ಶಾಸಕಿ ಪರಿಮಳಾ ನಾಗಪ್ಪ ಪಕ್ಷ ಬದಲಾಯಿಸಿ, ಪ್ರಸ್ತುತ ಚಿಹ್ನೆಯೇ ಇಲ್ಲದ ಕೆಜೆಪಿಗೆ ಸೇರ್ಪಡೆಗೊಂಡಿರುವುದು ಮತದಾರರ ಗೊಂದಲಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಇಕ್ಕಡಹಳ್ಳಿ ಬಸವಣ್ಣ ವ್ಯಂಗ್ಯವಾಡಿದ್ದಾರೆ. ಪರಿಮಳಾ ನಾಗಪ್ಪ ಅವರು 2007ರಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಶಾಸಕರಾಗಿ ಆಯ್ಕೆಯಾದರು. ನಂತರ 2009ರ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಸ್ಪರ್ಧಿಸಿ ಪರಾಭವಗೊಂಡರು. 2010ರಲ್ಲಿ ಬಿಜೆಪಿ ಸೇರ್ಪಡೆಗೊಂಡು, ಪ್ರಸ್ತುತ 2013ರಲ್ಲಿ ಅವಕಾಶವಾದಿ ರಾಜಕಾರಣ ಮಾಡಲು ಕೆಜೆಪಿ ಸೇರಿದ್ದಾರೆ. ಪರಿಮಳಾ ನಾಗಪ್ಪ ಅವರು ಚಿಹ್ನೆಯೇ ಇಲ್ಲದ ಕೆಜೆಪಿಯಲ್ಲಿ ಗುರ್ತಿಸಿಕೊಂಡು ಪಕ್ಷವನ್ನು ಸಂಘಟಿಸದಿರುವುದು ಕಾರ್ಯಕರ್ತರು ಹಾಗೂ ಮತದಾರರಲ್ಲಿ ಗೊಂದಲ ಉಂಟುಮಾಡಿದೆ. ದಿ.ನಾಗಪ್ಪ ಸಹಾ 1964ರಿಂದಲೂ ಒಂದೇ ಚಿನ್ಹೆಯಲ್ಲಿ ಸ್ವರ್ಧಿಸಿಲ್ಲ. ಪರಿಮಳಾ ನಾಗಪ್ಪ ಅವರು ಬಿಜೆಪಿ ಸೇರಿದಾಗಿನಿಂದಲೂ ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಲಿಲ್ಲ. 2009ರಲ್ಲಿ ಬಿಎಸ್ಪಿ ಸೇರಿದಾಗಲೂ ಬಿಎಸ್ಪಿಯನ್ನು ಸಂಘಟಿಸದೆ ದೂರ ಉಳಿದರು ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.