ವಾಸವಿ ಸಂಸ್ಥೆಯಿಂದ ಮೌಲ್ಯಯುತ ಶಿಕ್ಷಣ
ಕೊಳ್ಳೇಗಾಲ: ನಗರದ ವಾಸವಿ ಶಿಕ್ಷಣ ಸಂಸ್ಥೆ ಗುಣಮಟ್ಟ ಹಾಗೂ ಮಾನವೀಯ ಮೌಲ್ಯದ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಡಿಡಿಪಿಐ ಡಾ. ಎನ್.ಚಂದ್ರೇಗೌಡ ಪ್ರಶಂಸಿಸಿದರು.
ಅವರು ನಗರದಲ್ಲಿ ವಾಸವಿ ವಿದ್ಯಾಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರ್ಯ ವೈಶ್ಯ ಸಮುದಾಯ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದೆ. ಈ ಜನಾಂಗದಲ್ಲಿ ನ್ಯಾಯಯುತ ವ್ಯಾಪಾರ, ಸಮಾಜಮುಖಿ ಸೇವೆ, ಬಡವರ ಪರ ಸ್ಪಂದಿಸುವ ಮನೋಭಾವವಿದೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಸಿದ್ದದೇವರು ಮಾತನಾಡಿ, ಶಿಕ್ಷಣ ಕರಗದ, ಕದಿಯಲಾಗದ ಸಂಪತ್ತು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿಯೇ ಸಾಧಕರಾಗಬೇಕು. ಸಾಗಿ ಬಂದ ಹಾದಿಯನ್ನು ಎಂದಿಗೂ ಮರೆಯಬಾರದು ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಚನ್ನಬಸವಣ್ಣ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರೆ ಸಾಲದು. ದೇಶಪ್ರೇಮ, ಭಾತೃತ್ವ, ಗುರು ಹಿರಿಯಲ್ಲಿ ಗೌರವ ಭಾವನೆ ತಳೆಯಬೇಕು. ಉತ್ತಮ ಸಂಸ್ಕಾರದಿಂದ ಅತ್ಯುನ್ನತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.
ಶಾಲಾ ಹಾಗೂ ಕಾಲೇಜು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಾಸವಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಶೋಭಾ, ಕಾರ್ಯದರ್ಶಿ ವೆಂಕಟೇಶ್, ಡಾ. ಶ್ರೀಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಉದ್ಯಮಿ ದೇವೇಂದ್ರ ಗುಪ್ತಾ, ಮಾಜಿ ಅಧ್ಯಕ್ಷರಾದ ಕೃಷ್ಣಶೆಟ್ಟಿ, ಪ್ರಕಾಶ್ ಗುಪ್ತಾ, ವೆಂಕಟರಾಮ ಶೆಟ್ಟಿ, ವಿಶ್ವನಾಥಶೆಟ್ಟಿ, ಒ.ಎ.ವೇಣುಗೋಪಾಲ್, ನಗರಸಭಾ ಸದಸ್ಯ ಹರ್ಷ, ಡಯಟ್ ಉಪನ್ಯಾಸಕ ಚಂದ್ರಕಾಂತ್, ದೈಹಿಕ ಪರಿವೀಕ್ಷಕ ಜವರಯ್ಯ, ಉಪನ್ಯಾಸಕ ನಾಗೇಂದ್ರ, ಮಾಣಿಕ್ಯಂ ಸೇರಿದಂತೆ ಹಲವರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.