ಪಡಿತರ ವಿತರಣೆಯಲ್ಲಿ ಬಿಜೆಪಿ ವಿಫಲ
ಚಾಮರಾಜನಗರ: ಸಾರ್ವಜನಿಕರ ಪಡಿತರ ಚೀಟಿ ವಿತರಣೆ ಹಾಗೂ ಪಡಿತರ ವಿತರಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಚಾಮರಾಜನಗರ ಲೋಕಸಭಾ ಹಾಗೂ ವಿಧಾನಸಭಾ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಮಾತನಾಡಿ, ಬಿಜೆಪಿ ಹಲವಾರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ರಾಜ್ಯದ ಜನತೆಯ ಆಶೋತ್ತರಗಳಿಗೆ ಕಲ್ಲು ಹಾಕಿದೆ. ಈಗ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಚೀಟಿ ಹಾಗೂ ಪಡಿತರವನ್ನು ಸಮರ್ಪಕವಾಗಿ ವಿತರಣೆ ಮಾಡುವುದರಲ್ಲೂ ರಾಜಕೀಯ ಮಾಡಿ, ಬಿಪಿಎಲ್ ಹೊಂದಿರುವವರಿಗೆ ಎಪಿಎಲ್ ಚೀಟಿ ನೀಡುತ್ತಿದೆ. ಅಲ್ಲದೆ ಪಡಿತರ ಚೀಟಿ ಪಡೆಯಬೇಕಾದರೂ ಭಾರಿ ಪ್ರಯಾಸ ಪಡಬೇಕಿದ್ದು, ಅನಗತ್ಯ ದಾಖಲಾತಿ ಲಗತ್ತಿಸಬೇಕೆಂದು ಜನರಿಗೆ ಒತ್ತಾಯ ಮಾಡಿ, ಅವರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.
ಪಡಿತರ ಚೀಟಿಯ ಅಸಮರ್ಪಕ ವಿತರಣೆ ಒಂದೆಡೆಯಾದರೆ, ಪಿಎಸಿಸಿ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡುವ ಆಹಾರ ಪದಾರ್ಥಗಳೂ ಕಳಪೆಯಾಗಿವೆ. ಅಲ್ಲದೇ ಕಳೆದ 2 ತಿಂಗಳಿಂದ ಸಂಚಾರಿ ನ್ಯಾಯಬೆಲೆ ಅಂಗಡಿಗಳಿಂದ ಆಹಾರ ಪದಾರ್ಥ ವಿತರಣೆ ಮಾಡಿಲ್ಲ. ಅಲ್ಲದೇ ಪ್ರಸ್ತುತ ವಿತರಣೆ ಮಾಡಿರುವ ಪಡಿತರಕ್ಕೆ 2 ಬದಲಾಗಿ 50 ಪೈಸೆ ಹೆಚ್ಚು ತೆಗೆದುಕೊಳ್ಳಲಾಗುತ್ತಿದೆ ಎಂದು ದೂರಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯದಿಂದ ಇಂದಿನವರೆಗೆ ಭೂಹಗರಣ, ಲೈಂಗಿಕ ಹಗರಣ, ಕೆಐಎಡಿಬಿ ಹಗರಣ, ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ, ಈಗ ಬಡ ಜನತೆಯ ಹೊಟ್ಟೆ ಮೇಲೆ ಹೊಡೆಯಲು ಮುಂದಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ, ಹಗರಣದ ಸರಮಾಲೆ ಹೊತ್ತಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆರೆಹಳ್ಳಿ ನವೀನ್, ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್. ಅರುಣ ಕುಮಾರ್, ಸ್ವಾಮಿ, ಶ್ವೇತಾ, ಸತೀಶ್ ಮೂರ್ತಿ, ಪ್ರಕಾಶ್, ಗೌರೀಶ್, ಚಂದ್ರು, ಮಾರ್ಕೆಟ್ ಗಿರೀಶ್ ಸೇರಿದಂತೆ ಇತರರಿದ್ದರು.