ಮಡಿವಾಳ ಮಹಿಳೆ ಮೇಲೆ ದೌರ್ಜನ್ಯ: ಬಂಧನಕ್ಕೆ ಆಗ್ರಹ
ಚಾಮರಾಜನಗರ: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೆಗ್ಗಂದೂರು(ಹೈರಿಗೆ) ಗ್ರಾಮದ ಮಡಿವಾಳ ಜನಾಂಗದ ಮಹಿಳೆ ಮೇಲೆ ದೌರ್ಜನ್ಯವೆಸಗಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ತಾಲೂಕು ಮಡಿವಾಳ ಸಂಘದ ಪದಾಧಿಕಾರಿಗಳು, ಮುಖಂಡರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ಜ.21ರಂದು ಹುಣಸೂರು ತಾಲೂಕಿನ ಹೆಗ್ಗಂದೂರು(ಹೈರಿಗೆ) ಗ್ರಾಮದ ಮಡಿವಾಳ ಜನಾಂಗದ ಮಹಿಳೆ ಮಹದೇವಮ್ಮ ಎಂಬವರ ಮೇಲೆ ಅದೇ ಗ್ರಾಮದ ಕಾಳೇಗೌಡ ಹಾಗೂ ಆತನ ಕುಟುಂಬದ 7 ಮಂದಿ ಸೀಮೆಎಣ್ಣೆ ಸುರಿದು ಕೊಲೆ ಪ್ರಯತ್ನ ನಡೆಸಿರುವುದು ಸತ್ಯ ಘಟನೆಯಾಗಿದೆ.ಪ್ರಕರಣ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಆದರೂ ಮೈಸೂರು ಜಿಲ್ಲಾಡಳಿತ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಜನಾಂಗಕ್ಕೆ ಮಾಡಿದ ಅನ್ಯಾಯ ಹಾಗೂ ಅಪಮಾನವಾಗಿದೆ ಎಂದು ಆರೋಪಿಸಿದರು.
ಈ ಸಂಬಂಧ ಘಟನೆಗೆ ಸಂಬಂಧಿಸಿದವರನ್ನು ಬಂಧಿಸಿ, ಅವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು. ನೊಂದ ಮಹಿಳೆ ಮಹದೇವಮ್ಮ ಹಾಗೂ ಜನಾಂಗಕ್ಕೆ ಮುಂದಿನ ದಿನಗಳಲ್ಲಿ ಬಹು ಸಂಖ್ಯಾತರಿಂದ ನಡೆಯುವ ದೌರ್ಜನ್ಯ ತಡೆಗಟ್ಟಿ, ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಸಿದ್ದಶೆಟ್ಟಿ, ಕಾರ್ಯದರ್ಶಿ ಜೆ.ಸಿದ್ದಶೆಟ್ಟಿ, ಉಪಾಧ್ಯಕ್ಷ ರಾಮಸಮುದ್ರ ನಾಗರಾಜು, ಹೋಬಳಿ ಮಟ್ಟದ ಪದಾಧಿಕಾರಿಗಳಾದ ಎಸ್. ಸುಬ್ಬಯ್ಯ, ಮಹದೇವಶೆಟ್ಟಿ, ಮರಿಸ್ವಾಮಿ ಶೆಟ್ಟಿ, ಮಲ್ಲಶೆಟ್ಟಿ, ಸಹ ಕಾರ್ಯದರ್ಶಿಗಳಾದ ರಮೇಶ್, ಕುಮಾರಸ್ವಾಮಿ, ದುಂಡು ಮಹದೇವ, ಸುರೇಶ್ ಭಾಗವಹಿಸಿದ್ದರು.