ಕೆಜೆಪಿ ಕಾಲಿಂಗ್: ಬಿಜೆಪಿ ಬಿಟ್ಟ ಪ್ರೊಫೆಸರ್
ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಋಣ ತೀರಿಸುವ ಸಲುವಾಗಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ರಾಜಿನಾಮೆ ನೀಡಿದ್ದಾರೆ.
ಮೈಸೂರು- ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾದ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ ಅವರಿಗೆ ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಅವರು ಇದೀಗ ಬಿಜೆಪಿ ತೊರೆದಿದ್ದು, ಮೈಸೂರಿನಲ್ಲಿ ಫೆ.16ರಂದು ನಡೆದ ಕೆಜೆಪಿ ಸಮಾರಂಭದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾರೆ.
ಬಿಎಸ್‌ವೈ ಆಹ್ವಾನ: ಯಡಿಯೂರಪ್ಪ ಬಿಜೆಪಿ ತೊರೆದ ನಂತರ ಮಲ್ಲಿಕಾರ್ಜುನಪ್ಪ ಬಿಜೆಪಿಯಲ್ಲೇ ಉಳಿಯುತ್ತಾರೋ ಅಥವಾ ಕೆಜೆಪಿ ಸೇರುತ್ತಾರೋ ಎಂಬ ಗೊಂದಲ ನಿರ್ಮಾಣವಾಗಿತ್ತು. ಆದರೆ, ಅವರು ಯಾವುದನ್ನೂ ಸ್ಪಷ್ಟಪಡಿಸದೆ ವಿಧಾನಸಭಾ ಅಧಿವೇಶನದ ಬಳಿಕ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಹೇಳುತ್ತಲೇ ಬಂದಿದ್ದರು. ಕೆಲ ದಿನಗಳ ಹಿಂದೆ ಯಡಿಯೂರಪ್ಪ ಮೈಸೂರಿನ ಮಲ್ಲಿಕಾರ್ಜುನಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಅಂತೆಯೇ ಮಲ್ಲಿಕಾರ್ಜುನಪ್ಪ ಪಕ್ಷಕ್ಕೆ ಸೇರ್ಪಡೆಯಾಗಲು ಸೂಕ್ತ ವೇದಿಕೆ ನಿರ್ಮಾಣ ಮಾಡಿಕೊಂಡು ಬಿಜೆಪಿ ತೊರೆದಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ರಾಜಕೀಯ ಪ್ರವೇಶಿಸಿದ ಅವರು ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಟಿಕೆಟ್ ಸಿಕ್ಕಿರಲಿಲ್ಲ. ಇದಾದ ಬಳಿಕ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಬಳಿಕ ಮೈಸೂರು- ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾದರು. ನಂತರ ಪಕ್ಷ ಸಂಘಟನೆ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿತ್ತು.
ಜಿಲ್ಲೆಯಲ್ಲಿ ಬಿಜೆಪಿ ಖಾತೆ: 2008 ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರ ಅಲೆ ಇದ್ದರೂ ಗ್ರಾಮಾಂತರ ಪ್ರದೇಶದಲ್ಲಿ ಪಕ್ಷ ಖಾತೆ ತೆರೆದಿರಲಿಲ್ಲ. ನಂತರ ನಡೆದ ಕೊಳ್ಳೇಗಾಲ ಉಪ ಚುನಾವಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನಪ್ಪ ಪಕ್ಷದ ಅಭ್ಯರ್ಥಿ ಗೆಲವಿಗೆ ಹೆಚ್ಚಿನ ಮುನ್ನಡೆ ತಂದುಕೊಟ್ಟಿದ್ದರು. ಇದಾದ ನಂತರ ವಿಧಾನ ಪರಿಷತ್‌ಗೆ ಆಯ್ಕೆಯಾದರು. ಪಕ್ಷ ಸಂಘಟನೆ ಸಲುವಾಗಿ ಅಧ್ಯಕ್ಷಗಿರಿ ಸಹ ನೀಡಲಾಗಿತ್ತು. ಮಲ್ಲಿಕಾರ್ಜುನಪ್ಪ ಅಧ್ಯಕ್ಷರಾದ ಬಳಿಕ ಗ್ರಾಪಂ, ತಾಪಂ ಮತ್ತು ಜಿಪಂನಲ್ಲಿ ಬಿಜೆಪಿ ಖಾತೆ ತೆರೆಯಿತು. ಸಹಕಾರ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸುವ ಜೊತೆಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಮಲ್ಲಿಕಾರ್ಜುನಪ್ಪ, ಯಡಿಯೂರಪ್ಪ ಅವರ ಕೈ ಬಲಪಡಿಸುವ ಸಲುವಾಗಿ ಕೆಜೆಪಿಗೆ ಸೇರ್ಪಡೆಯಾಗಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನನ್ನ ಬೆಂಬಲಿಗರ ಪೈಕಿ ಶೇ.80ಕ್ಕೂ ಹೆಚ್ಚು ಮಂದಿ ಕೆಜೆಪಿಗೆ ಸೇರ್ಪಡೆಯಾಗುವಂತೆ ಸಲಹೆ ನೀಡಿದ್ದರು. ಇದೀಗ ಕೆಜೆಪಿ ಸೇರ್ಪಡೆಯಾಗಲು ಮುಂದಾಗಿದ್ದೇನೆ.
ಚಾಮರಾಜನಗರ ಕ್ಷೇತ್ರದ ಮತದಾರರು ಮತ್ತು ಯಡಿಯೂರಪ್ಪ ಅಪೇಕ್ಷೆ ಪಟ್ಟರೆ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಅದಕ್ಕಾಗಿ ಕ್ಷೇತ್ರದಾದ್ಯಂತ ಪ್ರವಾಸ ಮಾಡಿ, ನಂತರ ಚಾಮರಾಜನಗರ ಕ್ಷೇತ್ರದಲ್ಲಿ ಬೃಹತ್‌ಸಭೆ ಮಾಡುವ ಮೂಲಕ ನನ್ನ ಬೆಂಬಲಿಗರೊಂದಿಗೆ ಕೆಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದರು.
-ದೇವರಾಜು ಕಪ್ಪಸೋಗೆ