ದಕ್ಷಿಣ ಭಾರತದ ಮೊದಲ ಮೇವಿನ ಬಿಲ್ಲೆ ಘಟಕ ಸಿದ್ಧ
ಚಾಮರಾಜನಗರ: ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಚಾಮರಾಜನಗರ ತಾಲೂಕಿನ ಕಾಳನಹುಂಡಿ ರಸ್ತೆಯಲ್ಲಿರುವ ಮುಣಚನಹಳ್ಳಿಯಲ್ಲಿ ಮೇವಿನ ಬಿಲ್ಲೆ ಘಟಕ ಕಾರ್ಯಾರಂಭವಾಗಲು ಸಜ್ಜಾಗಿದೆ. ಸತತ ಬರದಿಂದ ತತ್ತರಿಸಿ ಹೋಗಿರುವ ರೈತರಿಗೆ ಮೇವಿನ ಬಿಲ್ಲೆ ಘಟಕ ವರದಾನವಾಗಿದೆ.
ಹಸಿರು ಮೇವಿನ ಲಭ್ಯತೆ ಕಡಿಮೆ ಇರುವ ಪ್ರದೇಶದ ರೈತರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಐದು ಘಟಕಗಳನ್ನು ಮಂಜೂರು ಮಾಡಿದೆ. ಇವುಗಳ ಪೈಕಿ ಪೈಕಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ 2 ಕೋಟಿ ವೆಚ್ಚದಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ಈ ಘಟಕ ನಿರ್ಮಿಸಿದೆ. ಫೆ.20 ಈ ಘಟಕ ಉದ್ಘಾಟನೆಗೊಳ್ಳಲಿದೆ.
ಒಣ ಮೇವು ನಷ್ಟವಾಗುವುದನ್ನು ತಪ್ಪಿಸುವುದು ಹಾಗೂ ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಪದಾರ್ಥ ಬಳಸಿಕೊಂಡು ಒಣ ಮೇವಿನ ಮೌಲ್ಯದ ವೃದ್ಧಿಗೆ ಒತ್ತು ನೀಡಲು ಈ ಘಟಕ ಸ್ಥಾಪಿಸಲಾಗುತ್ತಿದೆ. ಜತೆಗೆ, ದುಬಾರಿ ಪಶು ಆಹಾರದಿಂದ ಬೇಸತ್ತು ಹೈನುಗಾರಿಕೆಗೆ ಹಿಂದೇಟು ಹಾಕುವ ರೈತರಿಗೆ ಘಟಕದಿಂದ ಹೆಚ್ಚಿನ ಅನುಕೂಲವಾಗಲಿದೆ. ಶೇ.60ರಷ್ಟು ಒಣ ಮೇವನ್ನು (ಬತ್ತ, ರಾಗಿ ಹುಲ್ಲು, ಜೋಳದಕಣಿಕೆ, ಗೋಧಿ ಒಣ ಹುಲ್ಲು) ಅರ್ಧ ಇಂಚಿನಷ್ಟು ಕತ್ತರಿಸಲಾಗುತ್ತದೆ. ಬಳಿಕ ಕಚ್ಚಾ ಪದಾರ್ಥಗಳಾದ ಹಿಂಡಿ, ತೌಡು, ಕಾಕಂಬಿ, ಉಪ್ಪು, ಇತರೇ ಲವಣಾಂಶ ಮಿಶ್ರಣ ಮಾಡಲಾಗುತ್ತದೆ. ನಂತರ ನಿಗದಿತ ಪ್ರಮಾಣದಲ್ಲಿ ತುಂಡರಿಸಿದ ಒಣಮೇವು ಹಾಗೂ ಕಚ್ಚಾ ಪದಾರ್ಥಗಳನ್ನು ಮಿಶ್ರಣ ಮಾಡಿ 10 ಕೆ.ಜಿ. ತೂಕದ ಒತ್ತಡ ಹೇರಿ ಬಿಲ್ಲೆ ತಯಾರಿಸಲಾಗುತ್ತದೆ.
ಈಗಾಗಲೇ ಉತ್ತರ ಭಾರತದ ಪಂಜಾಬ್, ಹರ್ಯಾಣ, ಉತ್ತರಪ್ರದೇಶದಲ್ಲಿ ಒಣಮೇವು ಬಿಲ್ಲೆ ತಯಾರಿಕೆ ತಂತ್ರಜ್ಞಾನ ಹೆಚ್ಚು ಬಳಕೆಯಲ್ಲಿದೆ. ರಾಜ್ಯದಲ್ಲಿಯೂ ಒಣ ಮೇವಿನ ಬಿಲ್ಲೆ ತಯಾರಿಕೆ ಘಟಕ ಸ್ಥಾಪಿಸಿ ಹೈನುಗಾರಿಕೆಗೆ ಉತ್ತೇಜನ ನೀಡಲು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಿರ್ಧರಿಸಿತ್ತು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅನುದಾನ ಬಳಸಿಕೊಂಡು ಉಳಿದ ಜಿಲ್ಲೆಗಳಿಗಿಂತಲೂ ಮೊದಲೇ ಘಟಕ ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಲು ಮೈಮುಲ್ ಮುಂದಾಗಿದೆ. ಈ ಘಟಕಕ್ಕೆ ಯೋಜನೆಯಡಿ 1 ಕೋಟಿ ಅನುದಾನ ಲಭಿಸಿದೆ. ಮೈಮುಲ್ನಿಂದ 5 ಎಕರೆ ಜಮೀನು ಖರೀದಿಸಿ ಘಟಕದ ಕಟ್ಟಡ ನಿರ್ಮಿಸಲಾಗಿದೆ.
ಇದು ಪ್ರತಿನಿತ್ಯ ಕನಿಷ್ಠ 12 ಮೆಟ್ರಿಕ್ ಟನ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಬೇಡಿಕೆ ಕಂಡುಬಂದರೆ 24 ಟನ್ನಷ್ಟು ಉತ್ಪಾದಿಸಬಹುದು ಎಂದು ಮೈಮುಲ್ನ ಮೇವು ಮತ್ತು ಪಶು ಆಹಾರ ವಿಭಾಗ ಉಪ ವ್ಯವಸ್ಥಾಪಕ ಲಕ್ಷ್ಮಿ ಪ್ರಸಾದ್ ತಿಳಿಸಿದರು.
ಬಿಲ್ಲೆಗಳಲ್ಲಿ ಮೇವು, ಪಶು ಆಹಾರ ಎರಡೂ ಮಿಶ್ರಣವಾಗುವುದರಿಂದ ರಾಸುಗಳಿಗೆ ಅವಶ್ಯವಿರುವ ಪೌಷ್ಟಿಕಾಂಶ ಲಭ್ಯತೆಯಿಂದ ಸಂಪೂರ್ಣ ಆಹಾರವಾಗಿದೆ. ರಾಸುಗಳ ಸಂತಾನೋತ್ಪತ್ತಿ ವೃದ್ಧಿಯಲ್ಲೂ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಮೈಮುಲ್ನ ಶೇಖರಣೆ ವಿಭಾಗದ ವ್ಯವಸ್ಥಾಪಕ ಆನಂದರಾಜು ತಿಳಿಸಿದರು.
-ದೇವರಾಜು ಕಪ್ಪಸೋಗೆ