ಕ್ಷೇತ್ರಕ್ಕೆಲ್ಲ ಸೌಕರ್ಯ ಕಲ್ಪಿಸಿದ್ದೇನೆ: ಪುಟ್ಟರಂಗಶೆಟ್ಟಿ
ಚಾಮರಾಜನಗರ: ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿ, ಆಶ್ರಯ ಮನೆಗಳ ವಿತರಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಅವರು ತಾಲೂಕಿನ ತಾವರೆಕಟ್ಟೆ ಮೋಳೆ ಗ್ರಾಮದಲ್ಲಿ ವಿವಿಧ ಗ್ರಾಮಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ರಸ್ತೆ ಹದಗೆಟ್ಟು ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇದರ ನಿವಾರಣೆಗಾಗಿ ನಮ್ಮಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 2.23 ಕೋಟಿ ರು. ವೆಚ್ಚದಲ್ಲಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗುವುದು ಎಂದರು.
ಈ ಯೋಜನೆಯಡಿಯಲ್ಲಿ ತಾಲೂಕಿನ ಹರದನಹಳ್ಳಿ ಗ್ರಾಮದಿಂದ ತಾವರಕಟ್ಟೆ ಗ್ರಾಮಕ್ಕೆ ಹೋಗುವ ರಸ್ತೆ, ತಾವರಗಟ್ಟೆ ಮೋಳೆಯಿಂದ ಸೋಮವಾರ ಪೇಟೆಗೆ ಸೇರುವ 6 ಕಿ.ಮೀ. ಉದ್ದ ರಸ್ತೆ, 2 ಸೇತುವೆ ಅಭಿವೃದ್ಧಿಗೆ 2.23 ಕೋಟಿ ಮೂಕನಪಾಳ್ಯಗ್ರಾಮದ ರಸ್ತೆ ಅಭಿವೃದ್ಧಿಗೆ 1.45 ಕೋಟಿ, ಬೂದಿಪಡಗದ ರಂಗಸಂದ್ರ ಗ್ರಾಮದ 3 ಕಿ.ಮೀ. ರಸ್ತೆಗೆ 1.15 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ರಸ್ತೆ ಹಾಗೂ ಸೇತುವೆಯ ಕಾಮಗಾರಿಗಳು ಉತ್ತಮ ಗುಣಮಟ್ಟದ್ದಾಗಿದ್ದು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಸಹ ಇದಕ್ಕೆ ಸಹಕಾರ ನೀಡಬೇಕು. ಹತ್ತಾರು ವರ್ಷಗಳ ಕಾಲ ರಸ್ತೆ ಉಳಿಯುವಂತ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿ.ಪಂ. ಸದಸ್ಯೆ ಕಾವೇರಿ ಶಿವಕುಮಾರ್ ಮಾತನಾಡಿ, ಜಿ.ಪಂ ಅನುದಾನದಲ್ಲಿ ತಾವರೆಕಟ್ಟೆ ಮೋಳೆ ಗ್ರಾಮದ ರಸ್ತೆಗಳಿಗೆ 3.5 ಲಕ್ಷ ವೆಚ್ಚದಲ್ಲಿ ಮೆಟ್ಲಿಂಗ್ ಮಾಡಲಾಗಿದ್ದು, ಕುಡಿಯುವ ನೀರಿಗಾಗಿ 3 ಹಂತಗಳಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ 3 ಕಿರು ನೀರು ಸರಬರಾಜು ಯೋಜನೆಗಳನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷೆ ಪಾರ್ವತಮ್ಮ, ತಾ.ಪಂ. ಸದಸ್ಯೆ ಕಾಂತಮಣಿ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಗ್ರಾ.ಪಂ. ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಶಿವಕುಮಾರ್, ಪಾಂಡುರಂಗ, ಮಹೇಶ್, ಮುಖಂಡರಾದ ಸುಂದರಪ್ಪ, ಜಗದೀಶ್, ಚಿನ್ನೇಗೌಂಡರ್, ಜಗದೀಶ್, ರಾಜು, ಮಣಿ, ಪುಟ್ಟಸ್ವಾಮಿ, ಮಹೇಶ್, ಶಿವನಂಜಯ್ಯ, ಶಿವಣ್ಣ, ಬಸವಶೆಟ್ಟರು, ಸಾಧನ ಸಂಸ್ಥೆಯ ಸುರೇಶ್, ಮಹೇಶ್ ಇತರರು ಉಪಸ್ಥಿತರಿದ್ದರು.