ಪುರಸಭೆ ಅಭ್ಯರ್ಥಿಗಳ ಪ್ರಚಾರ ಆರಂಭ
ಕೆ.ಆರ್. ನಗರ: ಪುರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ದಿನಾಂಕ ಮುಗಿದು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿರುವುದರಿಂದ, ಭಾನುವಾರದಿಂದಲೆ ಮನೆ ಮನೆ ಪ್ರಚಾರ ಆರಂಭಿಸಿದ್ದು, ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಕಾರ್ಯಕರ್ತರೊಡಗೂಡಿ ಮತದಾರನ ಮನೆ ಬಾಗಿಲಿಗೆ ತೆರಳಿ, ತಮಗೆ ಮತ ನೀಡಿದರೆ ವಾರ್ಡ್ ಅಭಿವೃದ್ಧಿಗೆ ದುಡಿಯುವುದಾಗಿ ಭರವಸೆ ನೀಡುತ್ತಿದ್ದಾರಲ್ಲದೆ, ತಮ್ಮ ತಮ್ಮ ಪಕ್ಷಗಳ ಸಾಧನೆಗಳನ್ನು ಬಿಂಬಿಸುತ್ತಿದ್ದಾರೆ.
ಎರಡನೆ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಎಚ್.ಎನ್. ಶಿವಕುಮಾರ್ ತಮ್ಮ ಬೆಂಬಲಿಗರೊಂದಿಗೆ ಸಂಚರಿಸಿ ಕ್ಷೇತ್ರಕ್ಕೆ ಶಾಸಕ ಸಾ.ರಾ. ಮಹೇಶ್ ಮಾಡಿರುವ ಸೇವೆ ಮತ್ತು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡುತ್ತಿದ್ದು, ನನಗೆ ಒಮ್ಮೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
13ನೆ ವಾರ್ಡ್‌ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕವಿತಾ ಪ್ರಭುಶಂಕರ್, 14ನೇ ವಾರ್ಡ್‌ನಿಂದ ಸ್ಪರ್ಧಿಸಿರುವ ಕೆ.ಪಿ. ಪ್ರಭುಶಂಕರ್ ದಂಪತಿ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆ ಪ್ರಚಾರ ಆರಂಭಿಸಿದ್ದು, ಈ ಹಿಂದೆ ತಾವಿಬ್ಬರೂ ಸದಸ್ಯರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.
ಪಕ್ಷೇತರರನ್ನು ಬಿಟ್ಟು ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸದ್ದಿಲ್ಲದೆ ಮನೆ ಮನೆ ಪ್ರಚಾರ ಆರಂಭಿಸಿದ್ದು, ದಿನದಿಂದ ದಿನಕ್ಕೆ ಪುರಸಭಾ ಚುನಾವಣಾ ಕಣ ರಂಗೇರುತ್ತಿದೆ. ಅಭ್ಯರ್ಥಿಗಳು ಮತದಾರರ ಮನ ಗೆಲ್ಲುವ ವಿವಿಧ ಕಸರತ್ತು ಆರಂಭಿಸಿದ್ದಾರೆ.