ಬನ್ನೂರಿನಲ್ಲಿ ನೇತ್ರ ತಪಾಸಣೆ ಶಿಬಿರ
ಬನ್ನೂರು: ಇಂದು ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವನೆ ಮರೆತು ಹಣ ಮಾಡಲು ಮುಂದಾಗುತ್ತಿರುವ ಕಾಲದಲ್ಲಿ, ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರಗಳನ್ನು ಉಚಿತವಾಗಿ ಗ್ರಾಮೀಣ ಭಾಗದ ಜನತೆಗೆ ವಿವೇಕಾನಂದ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದನ್ನು ಕಾಂಗ್ರೆಸ್ ಮುಖಂಡ ಎಂ. ಸುಧೀರ್ ಶ್ಲಾಘಿಸಿದರು.
ಗ್ರಾಮ ದೇವತೆ ಶ್ರೀ ಹೇಮಾದ್ರಾಂಬ ದೇವಿ ಜಾತ್ರೆ ಹಾಗೂ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ವಿವೇಕಾನಂದ ಶಿಕ್ಷಣ ಸಂಸ್ಥೆ, ಸೇವಾ ಭಾರತಿ, ರಕ್ತದಾನಿಗಳ ಸಂಘ ಹಾಗೂ ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿನ ವಿವೇಕಾನಂದ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಣ್ಣಿಲ್ಲದ ಎಷ್ಟೋ ಜನರು ಅಂಧತ್ವದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ದೇಹದ ಮುಖ್ಯ ಅಂಗ ಕಣ್ಣು ಅದನ್ನು ಜೋಪಾನ ಮಾಡಿಕೊಳ್ಳಿ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಪ್ರಕಾಶ್ ಮಾತನಾಡಿದರು. ಶಿಬಿರದಲ್ಲಿ ಟಿ.ಜಿ. ಆದೀಶೇಷನ್ಗೌಡ, ಮುಖಂಡ ಪೊನ್ನುಸ್ವಾಮಿ, ಸೀಹಳ್ಳಿ ರಾಜು, ಜಿ. ನಯನಗೌಡ, ಶಿಕ್ಷಕ ಸಿದ್ದೇಗೌಡ, ಕೃಷ್ಣಾಜಿ, ಪ್ರಾಂಶುಪಾಲ ಕಿ.ಆ. ರಂಗನಾಥ್, ರಮೇಶ್, ಡಾ.ಗುರುಬಸವರಾಜು, ಡಾ.ಕಮಲ್, ಡಾ.ವಿಜಯಕಾಂತ್ ಹಾಗೂ ಸಂಸ್ಥೆಯ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.