'ಶಿಕ್ಷಣದಿಂದ ಜನಾಂಗ ಅಭಿವೃದ್ಧಿ'
ಚಾಮರಾಜನಗರ: ಉಪ್ಪಾರ ಜನಾಂಗದವರು ಆರ್ಥಿಕವಾಗಿ ಮುಂದೆ ಬರಲು ಶಿಕ್ಷಣವೊಂದೇ ದಾರಿ ಎಂದು ಕೆಎಸ್‌ಐಸಿ ಅಧ್ಯಕ್ಷ ನೂರೊಂದುಶೆಟ್ಟಿ ಅಭಿಪ್ರಾಯಪಟ್ಟರು.
ತಾಲೂಕಿನ ಮಂಗಲ ಗ್ರಾಮದಲ್ಲಿ 88 ಗಡಿ ಯಜಮಾನರುಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿದ್ದ ಸಮುದಾಯದ ಮುಖಂಡರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬದುಕು ಶಾಶ್ವತವಲ್ಲ, ನಶ್ವರ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಕೊಡುಗೆಗಳನ್ನು ನೀಡಬೇಕಾದರೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಸಮುದಾಯವೂ ಮುಂದುವರಿಯಬೇಕು. ಜನಾಂಗವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವಂತಾಗಬೇಕು. ನನ್ನ ಅಧಿಕಾರವಧಿಯಲ್ಲಿ ಜನಾಂಗದ ಅಭಿವೃದ್ಧಿಗೆ ನನ್ನ ಕೈಲಾದಮಟ್ಟಿಗೆ ಶ್ರಮವಹಿಸಿ ದುಡಿಯುತ್ತೇನೆ. ಜನಾಂಗವು ಮುಂದುವರಿಯಲು ಶಿಕ್ಷಣದ ಅಗತ್ಯ ಹೆಚ್ಚಾಗಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಬೇಕು, ಸಣ್ಣ ಮಕ್ಕಳಿಂದ ಪೋಷಕರು ಕಲಿಸುವ ಪ್ರತಿಯೊಂದು ವಿಷಯವೂ ಅವರ ಜೀವನ ಪರ್ಯಂತ ಅವರನ್ನು ಕಾಪಾಡುತ್ತದೆ. ಮಕ್ಕಳಿಗೆ ಉತ್ತಮವಾದ ಸಂಗತಿಗಳನ್ನು ತಿಳಿಸಿ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಲ ಶಿವಕುಮಾರ್, ಗಡಿ ಯಜಮಾನರುಗಳಾದ ಕೃಷ್ಣ, ದೊಡ್ಡಸ್ವಾಮಿ, ನಾರಾಯಣಸ್ವಾಮಿ, ಮಾರಶೆಟ್ಟಿ, ಖ್ಯಾತಶೆಟ್ಟಿ, ಮಹದೇವಶೆಟ್ಟಿ, ಗೋವಿಂದಶೆಟ್ಟಿ, ನಾಗಶೆಟ್ಟಿ, ಮುದ್ದುಶೆಟ್ಟಿ, ಶ್ರೀನಿವಾಸ, ರಾಜಣ್ಣ, ಮುತ್ತುಶೆಟ್ಟಿ, ನಿಂಗಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.