ಆತ್ಮಹತ್ಯೆ ಯತ್ನ
ಗುಂಡ್ಲುಪೇಟೆ: ತಾಲೂಕಿನ ಕೊಡಗಾಪುರ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಜಾತ್ರೆಗೆ ರಜೆ ನೀಡಿದರೆಂದು ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬುಧವಾರ ಬೆಳಗ್ಗೆ ಶಾಲೆಯ ಶಿಕ್ಷಕ ಸಿದ್ದರಾಜು ಶಾಲೆಗೆ ತೆರಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಫೆ.25ರಂದು ಬೇಗೂರು ಹೋಬಳಿಯ ಹೊಣಕನಪುರದ ಬಳಿ ಓಂಕಾರ ಸಿದ್ದೇಶ್ವರ ಜಾತ್ರೆ ಇರುವ ಕಾರಣ ಶಾಲೆಯ ಶಿಕ್ಷಕ ಸಿದ್ದರಾಜು ಶಾಲೆಗೆ ರಜೆ ನೀಡಿದ್ದರು. ಇದಕ್ಕೆ ಗ್ರಾಮದ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ ಶಿಕ್ಷಕನನ್ನು ಅಮಾನತ್ತಿನಲ್ಲಿಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮಂಗಳವಾರ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಶಾಲೆಗೆ ಹೋದ ಶಿಕ್ಷಕ ಸಿದ್ದರಾಜು ಶಾಲೆಯ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಗ್ರಾಮಸ್ಥರು ನೆರೆಯ ಕಬ್ಬಹಳ್ಳಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ಕಳುಹಿಸಲಾಗಿದೆ.