ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಬಂದೂಕು, ಆಯುಧ ಡಿಪಾಸಿಟ್‌ಗೆ ಸೂಚನೆ

Parashurama
Updated On : 27 Feb 2013, 11:42 am

ಚಾಮರಾಜನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀತಿಸಂಹಿತೆ ಜಾರಿಯಿದ್ದು, ಪರವಾನಗಿ ಹೊಂದಿರುವ ಬಂದೂಕು(ಆಯುಧ)ಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯ ಸುಪರ್ದಿಯಲ್ಲಿ ಡಿಪಾಸಿಟ್ ಮಾಡುವಂತೆ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಸೂಚಿಸಿದ್ದಾರೆ. ಮಾ.11ರವರೆಗೆ ನೀತಿಸಂಹಿತೆ ಜಾರಿಯಲ್ಲಿದ್ದು, ಆ ಅವಧಿವರೆಗೆ ಸಂಬಂಧ ಪಟ್ಟ ಪೊಲೀಸ್ ಠಾಣೆಯ ಸುಪರ್ದಿಗೆ ಬಂದೂಕು(ಆಯುಧ) ಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಸಾಕುಪ್ರಾಣಿ ಹಾವಳಿ ಕಡಿವಾಣಕ್ಕೆ ಸೂಚನೆ
ಚಾಮರಾಜನಗರ: ನಗರಸಭಾ ವ್ಯಾಪ್ತಿಯಲ್ಲಿ ಆಡು, ಹಂದಿ, ಕುರಿ, ದನ, ನಾಯಿ, ಮತ್ತಿತರ ಪ್ರಾಣಿಗಳನ್ನು ಸಾಕುತ್ತಿರುವ ಮಾಲೀಕರು ಸಾರ್ವಜನಿಕ ಸಂಚಾರಕ್ಕೆ ಸಾಕುಪ್ರಾಣಿಗಳಿಂದ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ಎಚ್ಚರಿಕೆ ನೀಡಿದೆ. ನಗರಸಭೆ ವ್ಯಾಪ್ತಿಯಲ್ಲಿ ಸಾಕುಪ್ರಾಣಿಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಓಡಾಟಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಅಲ್ಲದೆ ಸಾಕುಪ್ರಾಣಿಗಳು ನಗರದ ಉದ್ಯಾನವನ ಪ್ರವೇಶಿಸಿ ಗಿಡ, ಹೂ ಬಳ್ಳಿಗಳನ್ನು ತಿಂದು ಹಾಕಿರುವ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾಕುಪ್ರಾಣಿ ಮಾಲೀಕರು ತಮ್ಮ ಮನೆಯ ಸುಪರ್ದಿಯಲ್ಲಿ ಪ್ರಾಣಿಗಳ ನಿರ್ವಹಣೆ ಮಾಡಬೇಕು. ಹಂದಿ ಸಾಕುವ ಮಾಲೀಕರು ಪಟ್ಟಣದಿಂದ 5 ಕಿ.ಮೀ. ಹೊರ ವ್ಯಾಪ್ತಿಗೆ ಹಂದಿಗಳನ್ನು ಸ್ಥಳಾಂತರಿಸಬೇಕು. ಸಾಕುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕದಿದ್ದಲ್ಲಿ ನಗರಸಭೆ ಈ ಪ್ರಾಣಿಗಳನ್ನು ಹಿಡಿದು ಪಟ್ಟಣದಿಂದ ಹೊರ ಸಾಗಿಸುತ್ತದೆ. ಇದರಿಂದ ಉಂಟಾಗುವ ನಷ್ಟಗಳಿಗೆ ನಗರಸಭೆ ಜವಾಬ್ದಾರಿಯಾಗುವುದಿಲ್ಲ ಎಂದು ಪೌರಾಯುಕ್ತ ವಿ.ಹೆಚ್. ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಇಂದು ವಾರ್ಷಿಕೋತ್ಸವ
ಚಾಮರಾಜನಗರ: ನಗರದ ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯಲ್ಲಿ ಫೆ.27ರಂದು ಬೆಳಗ್ಗೆ 11 ಗಂಟೆಗೆ 2012-13ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಅತಿಥಿಯಾಗಿ ತಾಪಂ ಅಧ್ಯಕ್ಷ ಬಸವಣ್ಣ ಭಾಗವಹಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ ಸಮಾರೋಪ ನುಡಿಗಳನ್ನಾಡುವರು.
ಇಂದು ಸಂವಾದ
ಚಾಮರಾಜನಗರ: ಮಾ.7ರಂದು ನಡೆಯಲಿರುವ ನಗರಸಭೆ, ಪುರಸಭೆ, ಪಪಂ ಚುನಾವಣೆ ಸಂಬಂಧ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮವನ್ನು ಫೆ.28ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎನ್.ಸಿದ್ದಲಿಂಗಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement