ಬೇಗೂರು: ಶೀಘ್ರದಲ್ಲೇ ಶುದ್ಧ ಕುಡಿವ ನೀರು
ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದ ಸಾರಿಗೆ ಬಸ್ ನಿಲ್ದಾಣದಲ್ಲಿ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರು ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಈ ಸಂಬಂಧ ರಾಜ್ಯ ಸರ್ಕಾರ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ 5 ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಿದೆ. ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಕೆಲ ದಿನಗಳಲ್ಲೇ ಕುಡಿಯುವ ನೀರನ್ನು ಶುದ್ಧಗೊಳಿಸುವ ಯಂತ್ರವನ್ನು ಅಳಡಿಸಲಾಗುತ್ತದೆ. ನೀರು ಶುದ್ಧ ಮಾಡುವ ಯಂತ್ರದಲ್ಲಿ ಸುಮಾರು 20 ಲೀಟರ್ನಷ್ಟು ನೀರು ಯಾವಾಗಲೂ ಇರುತ್ತದೆ. ಆವರಣದಲ್ಲಿರುವ ಬೋರ್ವೆಲ್ನಿಂದ ನೀರನ್ನು ಯಂತ್ರಕ್ಕೆ ಹಾಕಿದರೆ ಪರಿಶುದ್ಧ ನೀರಾಗಿ ಮಾರ್ಪಾಡಾಗುತ್ತದೆ.ಸಾರಿಗೆ ಬಸ್ ನಿಲ್ದಾಣಗಳಿರುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಪ್ರಯಾಣಿಕರಿಗೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ರಾಜ್ಯಾಂದ್ಯಂತ ಜಾರಿಗೆ ತರಲಾಗಿದೆ ಎಂದು ಕೆಎಸ್ಆರ್ಟಿಯ ಎಂಜಿನಿಯರ್ ಸೋಮಶೇಖರ್ ಮಾಹಿತಿ ನೀಡಿದರು.