ಸ್ಥಳೀಯ ಸಂಸ್ಥೆ ಚುನಾವಣೆಗೆ ಜಿಲ್ಲಾಡಳಿತ ಸಜ್ಜು
ಚಾಮರಾಜನಗರ: ಜಿಲ್ಲೆಯಲ್ಲಿ ಮಾ.7ರಂದು ನಿಗದಿಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 2 ನಗರಸಭೆ, ಒಂದು ಪುರಸಭೆ ಹಾಗೂ 2 ಪಪಂಗಳಿದ್ದು ಒಟ್ಟು 109 ವಾರ್ಡ್ಗಳಿಗೆ, ನಗರಸಭೆ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 1,11,455 ಮತದಾರರಿದ್ದಾರೆ. ಈ ಪೈಕಿ 57695 ಪುರುಷರು, 53760 ಮಹಿಳಾ ಮತದಾರರಿದ್ದಾರೆ.
ಚಾಮರಾಜನಗರ ನಗರಸಭೆಯಲ್ಲಿ 31 ವಾರ್ಡುಗಳಿದ್ದು, ಒಟ್ಟು 44748 ಮತದಾರರಿದ್ದಾರೆ. ಅವರಲ್ಲಿ 23,964 ಪುರುಷರು ಮತ್ತು 20,748 ಮಹಿಳೆಯರು. ಕೊಳ್ಳೇಗಾಲ ನಗರಸಭೆಯಲ್ಲಿ 31 ವಾರ್ಡ್ಗಳಿದ್ದು, ಒಟ್ಟು 37095 ಮತದಾರರಿದ್ದಾರೆ. ಈ ಪೈಕಿ 18817 ಪುರುಷರು, 18278 ಮಹಿಳಾ ಮತದಾರರಿದ್ದಾರೆ. ಗುಂಡ್ಲುಪೇಟೆ ಪುರಸಭೆಯಲ್ಲಿ 23 ವಾರ್ಡ್ಗಳಿದ್ದು, 8030 ಪುರುಷರು, 8025 ಮಹಿಳೆಯರು ಸೇರಿದಂತೆ ಒಟ್ಟು 16055 ಮತದಾರರಿದ್ದಾರೆ. ಯಳಂದೂರು ಪಪಂನಲ್ಲಿ 11 ವಾರ್ಡ್ಗಳಿದ್ದು, ಒಟ್ಟು 6267 ಮತದಾರರಿದ್ದಾರೆ. ಈ ಪೈಕಿ 3120 ಪುರುಷರು ಮತ್ತು 3147 ಮಹಿಳಾ ಮತದಾರರಿದ್ದಾರೆ. ಹನೂರು ಪಪಂನಲ್ಲಿ 13 ವಾರ್ಡ್ಗಳಿದ್ದು, 3764 ಪುರುಷರು, 3526 ಮಹಿಳೆಯರು ಸೇರಿದಂತೆ ಒಟ್ಟು 7290 ಮತದಾರರಿದ್ದಾರೆ.
ಚಾಮರಾಜನಗರ ನಗರಸಭೆಯ 31 ವಾರ್ಡುಗಳಿಗೆ 58 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೊಳ್ಳೇಗಾಲದ 31 ವಾರ್ಡ್ಗಳಿಗೆ 49, ಗುಂಡ್ಲುಪೇಟೆ ಪುರಸಭೆಯ 23 ವಾರ್ಡ್ಗಳಿಗೆ 23, ಯಳಂದೂರು ಪಪಂನ 11 ವಾರ್ಡ್ಗಳಿಗೆ 11 ಹಾಗೂ ಹನೂರು ಪಪಂನ 13 ವಾರ್ಡ್ಗಳಿಗೆ 13 ಮತಗಟ್ಟೆಗಳನ್ನು ತೆರೆಯಲಾಗಿದೆ.
ಮಾ.2ರಂದು ಅಧಿಕಾರಿಗಳಿಗೆ ತರಬೇತಿ: ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 232 ಬ್ಯಾಲೆಟ್ ಯುನಿಟ್ ಮತ್ತು 154 ಕಂಟ್ರೋಲ್ ಯುನಿಟ್ಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡುವ ಬಗ್ಗೆ ಹಾಗೂ ಮತದಾನ ಅಧಿಕಾರಿಗಳಿಗೆ ಅಗತ್ಯವಿರುವ ತರಬೇತಿಯನ್ನು ಮಾ.2ರಂದು ಹಮ್ಮಿಕೊಳ್ಳಲಾಗಿದೆ. ತಾಲೂಕು ಕೇಂದ್ರಗಳಲ್ಲಿ ತರಬೇತಿ ನೀಡಲು ಮಾಸ್ಟರ್ ಟ್ರೈನರ್ಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ.
ಮತದಾನ ಪ್ರಕ್ರಿಯೆ ನಿರ್ವಹಣೆಗೆ ಒಟ್ಟು 616 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವರಲ್ಲಿ 154 ಮಂದಿ ಪ್ರಿಸೈಡಿಂಗ್, 154 ಮಂದಿ ಮೊದಲನೇ ಪೋಲಿಂಗ್ ಹಾಗೂ 308 ಮಂದಿ ಮತದಾನ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಚುನಾವಣಾ ನೀತಿಸಂಹಿತೆ ಪಾಲನೆ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನೀತಿಸಂಹಿತೆ ಜಾರಿ ತಂಡ ರಚಿಸಲಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ತಪಾಸಣೆಗಾಗಿ ಪ್ರತಿ 10 ವಾರ್ಡ್ಗಳಿಗೆ ಒಬ್ಬ ಲೆಕ್ಕಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಚುನಾವಣಾ ವೀಕ್ಷಕರಾಗಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ ಕೆ.ಆರ್. ಜಯಪ್ರಕಾಶ್ ರಾವ್ ಅವರನ್ನು ರಾಜ್ಯ ಚುನಾವಣಾ ಆಯೋಗ ನೇಮಿಸಿದೆ. ಜಿಲ್ಲೆಯ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಕೆ.ಸಿ. ಮಹದೇವಸ್ವಾಮಿ ಚುನಾವಣಾ ವೀಕ್ಷಕರಿಗೆ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಾಮರಾಜನಗರ ನಗರಸಭೆಯ ಮತದಾನಕ್ಕೆ ಸಂಬಂಧಿಸಿದ ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕಾರ್ಯವು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಕೊಳ್ಳೇಗಾಲ ನಗರಸಭೆ ಹಾಗೂ ಹನೂರು ಪಪಂಗೆ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಎಂಜಿಎಸ್ವಿ ಜೂನಿಯರ್ ಕಾಲೇಜಿನಲ್ಲಿ ಪ್ರಕ್ರಿಯೆ ನಡೆಯಲಿದೆ. ಗುಂಡ್ಲುಪೇಟೆ ಪುರಸಭೆಯ ಚುನಾವಣಾ ಮಸ್ಟರಿಂಗ್ ಕಾರ್ಯವು ಪಟ್ಟಣದ ತಾಲೂಕು ಕಚೇರಿಯಲ್ಲಿ, ಡೀಮಸ್ಟರಿಂಗ್ ಕಾರ್ಯವು ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಲಿದೆ. ಯಳಂದೂರು ಪಪಂನ ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕಾರ್ಯವನ್ನು ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಗುತ್ತದೆ.
ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಯನ್ನು ಮತಗಟ್ಟೆಗೆ ಕರೆದೊಯ್ಯಲು ಹಾಗೂ ಚುನಾವಣಾ ಇತರೆ ಕೆಲಸಗಳಿಗೆ 7 ಬಸ್, 4 ಮೆಟಡಾರ್ ಹಾಗೂ 40 ಜೀಪುಗಳನ್ನು ಬಳಸಲಾಗುತ್ತಿದೆ. ಮಾ. 11ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಈಗಾಗಲೇ ಮತ ಎಣಿಕೆ ಕೇಂದ್ರಗಳನ್ನು ಗುರುತಿಸಲಾಗಿದೆ.
ಚಾಮರಾಜನಗರ ನಗರಸಭೆಯ ಮತ ಎಣಿಕೆಯನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಸಲಿದ್ದು, ಕೊಳ್ಳೇಗಾಲ ನಗರಸಭೆ ಮತ್ತು ಹನೂರು ಪಪಂ ಮತ ಎಣಿಕೆಯನ್ನು ಕೊಳ್ಳೇಗಾಲದ ಎಂಜಿಎಸ್ವಿ ಜೂನಿಯರ್ ಕಾಲೇಜಿನಲ್ಲಿ ನಡೆಸಲಾಗುತ್ತದೆ.
ಗುಂಡ್ಲುಪೇಟೆ ಪುರಸಭೆ ಮತ ಎಣಿಕೆಯು ಪಟ್ಟಣದ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಯಳಂದೂರು ಪಪಂ ಮತ ಎಣಿಕೆ ಕಾರ್ಯ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.