ಎಲ್ಲ ವಾರ್ಡ್ ಕಾಂಗ್ರೆಸ್ಮಯ: ಎಚ್ಚೆಸ್ಸೆಂ
ಚಾಮರಾಜನಗರ: ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲ 109 ವಾರ್ಡ್ಗಳಲ್ಲೂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಅದರಲ್ಲಿ ಕೊಳ್ಳೇಗಾಲದ 2ನೇ ವಾರ್ಡಿನ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿರುವುದು ಪಕ್ಷದ ಗೆಲವಿಗೆ ಪೂರಕ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ವಿವಿಧ ರಾಜಕೀಯ ಪಕ್ಷಗಳಾದ ಜೆಡಿಎಸ್ 77, ಬಿಜೆಪಿ 75, ಕೆಜೆಪಿ 73 ಬಿಎಸ್ಸಾರ್ 51, ವಾಟಾಳ್ 15, ಕೆಎಂಪಿ 10, ಎಸ್ಡಿಪಿಐ 8 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 91 ಮಂದಿ ಪಕ್ಷೇತರರು ಕಣದಲ್ಲಿದ್ದು, ಈ ಬಾರಿ ನಡೆಯುವ ಚುನಾವಣೆಯು ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಜಿಲ್ಲೆಯ 109 ವಾರ್ಡುಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಏಕೈಕ ಪಕ್ಷ ಕಾಂಗ್ರೆಸ್. ಕಳೆದ ಬಾರಿ ನಡೆದ ಚುನಾವಣೆಯಲ್ಲಿ 63 ಸ್ಥಾನ ಪಡೆದಿದ್ದು, ಈ ಬಾರಿ ಜಿಲ್ಲೆಯ ಹನೂರು, ಗುಂಡ್ಲುಪೇಟೆ ಹಾಗೂ ಚಾಮರಾಜನಗರದಲ್ಲಿ ಪಕ್ಷದ ಶಾಸಕರಿರುವುದರಿಂದ ಹೆಚ್ಚಿನ ಸ್ಥಾನಗಳನ್ನು ಪಡೆಯುವ ವಿಶ್ವಾಸವಿದೆ ಎಂದರು.
ಹಲ ಪಕ್ಷಗಳ ನೋಂದಾವಣೆ: ಈಗಾಗಲೇ ಕಾಂಗ್ರೆಸ್ ಪರ ಒಲವು ಮೂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿವಿಧ ರಾಜಕೀಯ ಪಕ್ಷಗಳೇ ಒಪ್ಪಿಕೊಂಡಿವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 3 ಭಾಗವಾಗಿದೆ. ಇನ್ನುಳಿದಂತೆ ಜೆಡಿಎಸ್ ತನ್ನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೆಎಂಪಿ ಈಗಾಗಲೇ ನೋಂದಾವಣೆಯಾಗಿದ್ದು, ಎಸ್ಡಿಪಿಐ, ಕೆಜೆಪಿ, ಬಿಎಸ್ಆರ್ಗಳು ತಮ್ಮ ಅಸ್ತಿತ್ವ ಪ್ರದರ್ಶಿಸಲು ಹೊರಟಿವೆ ಎಂದರು.
ಈ ಹಿಂದೆ ನಗರಸಭೆ, ಪುರಸಭೆ, ಪಪಂಗಳಿಗೆ ಲಕ್ಷಗಳ ಸಂಖ್ಯೆಯಲ್ಲಿ ಅನುದಾನ ಬರುತ್ತಿತ್ತು. ಈಗ ಕೋಟಿ ಲೆಕ್ಕದಲ್ಲಿ ಅನುದಾನ ಬರುತ್ತಿದೆ. ಇದನ್ನು ಹೇಗೆ ಬಳಸಬೇಕು, ಸಭೆಗಳಲ್ಲಿ ಭಾಗವಹಿಸಿದಾಗ ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಈಗಾಗಲೇ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಗೆಲವು ಸಾಧಿಸಿ, ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳಿಗೆ ಸ್ಥಳೀಯ ಸಂಸ್ಥೆ ಆಡಳಿತ ನಿರ್ವಹಣೆ ಕುರಿತು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿ ಗೆಲವು ಸಾಧಿಸುವ ಅಭ್ಯರ್ಥಿಗಳಿಗೆ 2 ದಿನದ ತರಬೇತಿ ನೀಡಲಾಗುವುದು ಎಂದರು.
ನಗರಸಭಾ ಸದಸ್ಯರ ವರ್ತನೆಗೆ ಎಚ್ಎಸ್ಎಂ ಬೇಸರ: ಜವಾಬ್ದಾರಿಯುತ ನಗರಸಭಾ ಸದಸ್ಯರೊಬ್ಬರು ಬೇರೆಯವರ ಒತ್ತಾಯಕ್ಕೆ ಮಣಿದು, ನಾಮಪತ್ರ ಹಿಂತೆಗೆದುಕೊಂಡಿರುವುದು ಬೇಸರದ ಸಂಗತಿ ಎಂದು ಮಹದೇವಪ್ರಸಾದ್ ವಿಷಾದ ವ್ಯಕ್ತಪಡಿಸಿದರು.
ನಗರಸಭೆಯ 31ನೇ ವಾರ್ಡಿನಿಂದ ಟಿ.ಎಸ್. ಪ್ರಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಧರ್ಧಿಸಿದ್ದರು. ಕೊನೆ ಗಳಿಗೆಯಲ್ಲಿ ಯಾರದೋ ಒತ್ತಡಕ್ಕೆ ಮಣಿದು ನಾಮಪತ್ರ ವಾಪಸ್ ಪಡೆದಿದ್ದಾರೆ. ನಗರಸಭಾ ಸದಸ್ಯರಾಗಿದ್ದ ಅವರಿಗೆ ಶೋಭೆ ತರುವುದಿಲ್ಲ. ಮೊದಲೇ ತಾವು ಸ್ಪರ್ಧಿಸುವುದಿಲ್ಲ ಎಂದಿದ್ದರೆ ಬೇರೆಯವರನ್ನು ಸ್ಪರ್ಧೆಗಿಳಿಸಬಹುದಿತ್ತು. ಈಗಾಗಲೇ ಆ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯೊಬ್ಬರು ಕಣದಲ್ಲಿದ್ದು, ಅವರಿಗೆ ಬೆಂಬಲ ನೀಡುತ್ತೇವೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.