ಪ್ರತಿಪಕ್ಷವಾಗಾದ್ರೂ ಕಾರ್ಯ ನಿರ್ವಹಣೆ: ಮಲ್ಲಿಕಾರ್ಜುನಸ್ವಾಮಿ
ಚಾಮರಾಜನಗರ: ನಮ್ಮ ನಿರೀಕ್ಷೆಗೆ ಫಲಿತಾಂಶ ಬಾರದೇ ಹೋದರೆ ಪ್ರತಿಪಕ್ಷದಲ್ಲಾದರೂ ಕುಳಿತು ಆಡಳಿತ ನಡೆಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹುಂಡೀಪುರ ಮಲ್ಲಿಕಾರ್ಜುನಸ್ವಾಮಿ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಏರ್ಪಡಿಸಿದ್ದ ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರು ಮತ್ತು ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ 109 ವಾರ್ಡ್ಗಳಲ್ಲಿ 75 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಚಾಮರಾಜನಗರ ನಗರಸಭೆಗೆ ಇಬ್ಬರು ಬೆಂಬಲಿತ ಸೇರಿದಂತೆ 23 ಮಂದಿ, ಕೊಳ್ಳೇಗಾಲ ನಗರಸಭೆಗೆ 3 ಬೆಂಬಲಿತರು ಸೇರಿದಂತೆ 26, ಯಳಂದೂರಿನಲ್ಲಿ 10, ಗುಂಡ್ಲುಪೇಟೆ ಪುರಸಭೆಗೆ 12, ಹನೂರಿನಲ್ಲಿ ಪಕ್ಷದ ಪ್ರಭಾವ ಕುಗ್ಗಿರುವುದರಿಂದ 4 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.
ಕೊಳ್ಳೇಗಾಲದಲ್ಲಿ ನಿಮ್ಮದೇ ಪಕ್ಷದ ಶಾಸಕರಿದ್ದರೂ, ಕೇವಲ 26 ವಾರ್ಡ್ಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ನಿಮಗೆ ಸಾಮರ್ಥ್ಯವಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆಲ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರಿಂದ ಅಷ್ಟು ವಾರ್ಡ್ಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಶತಾಯಗತಾಯ ಸ್ಥಳೀಯ ಸಂಸ್ಥೆಗಳ ಆಡಳಿತದ ಚುಕ್ಕಾಣಿಯನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುವ ಯತ್ನ ಮಾಡಲಾಗುತ್ತದೆ. ನಮ್ಮ ಪಕ್ಷದ ಗೆಲವಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳೇ ಶ್ರೀರಕ್ಷೆ. ಈ ಸಂಬಂಧ ಶೆಟ್ಟರ್ ನೇತೃತ್ವದ ಸರ್ಕಾರ ತಂದ ಜನಪರ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಲಾಗುವುದು. ಒಂದು ವೇಳೆ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಾರದಿದ್ದರೆ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಶಾಸಕರ ವೈಫಲ್ಯ: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಪಂಚಾಕ್ಷರಿ ಮಾತನಾಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಹನೂರು ಶಾಸಕರು ವೈಫಲ್ಯ ಕಂಡಿದ್ದು, ಹನೂರು ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳಿಗೂ ಶಾಸಕರು ಅಡ್ಡಗಾಲು ಹಾಕುತ್ತಾರೆ. ಇದರಿಂದ ಶಾಸಕರ ಮೇಲೆ ಕ್ಷೇತ್ರದ ಜನತೆಗೆ ಬೇಸರವುಂಟಾಗಿದೆ. ಈ ಬಾರಿ ಜೆಡಿಎಸ್ ಪರ ಜನತೆ ಒಲವು ವ್ಯಕ್ತಪಡಿಸಿದ್ದು, 109 ಸ್ಥಾನಗಳಲ್ಲಿ 77 ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದ್ದೇವೆ. ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿದ್ದು, ಕನಿಷ್ಠ 60ರಿಂದ 65 ಸ್ಥಾನಗಳನ್ನು ಗೆಲ್ಲುವ ಭರವಸೆ ಇದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.